ಬೆಂಗಳೂರು : ಸಿಲಿಕಾನ್ ಸಿಟಿಯ ಸ್ಮಶಾನಗಳಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗುತ್ತಿದೆ. ಸದ್ಯ ನಗರದ ಬಹುತೇಕ ರುದ್ರಭೂಮಿಗಳು ಭರ್ತಿಯಾಗಿದ್ದು, ಇದರಿಂದ ಜನರಿಗೆ ಅನಾನುಕೂಲವಾಗ್ತಿರೋ ಬಗ್ಗೆ ಬಿಬಿಎಂಪಿಗೆ ದೂರುಗಳು ಬರುತ್ತಿದ್ದು, ಹೊಸ ಸ್ಮಶಾನ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ.
ಹೊಸ ಸ್ಮಶಾನ ಮತ್ತು ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ನಗರದ ಹೊರವಲಯದ ರಿಂಗ್ ರಸ್ತೆಗಳ ಪಕ್ಕದಲ್ಲಿ 25 ಎಕರೆ ಜಾಗ ಮಂಜೂರು ಮಾಡುವಂತೆ ಪಾಲಿಕೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದ್ರೆ, ಸರ್ಕಾರ ಬಿಬಿಎಂಪಿ ಮನವಿ ಮಾಡಿರುವಷ್ಟು ಜಾಗ ಮಂಜೂರು ಮಾಡದೇ, ಕೆ.ಆರ್ ಪುರ ಹೋಬಳಿ, ದೇವಸಂದ್ರ ಗ್ರಾಮದಲ್ಲಿ 30 ಗುಂಟೆ, ದಾಸನಪುರ ಹೋಬಳಿ ಕುದುರೆಗೆ ಗ್ರಾಮದಲ್ಲಿ 2 ಎಕರೆ, ಯಲಹಂಕದ ಬಾಗಲೂರು ಗ್ರಾಮದಲ್ಲಿ 1 ಎಕರೆ, ಶಿವನಪುರದಲ್ಲಿ 2 ಎಕರೆ ಉಲ್ಲೇನಗೌಡನ ಹಳ್ಳಿಯಲ್ಲಿ 2 ಎಕರೆ ಜಾಗವನ್ನು ಸ್ಮಶಾನಕ್ಕೆ ಮೀಸಲಾಗಿ ನೀಡಿದೆ.
ಅನೇಕ ವರ್ಷಗಳಿಂದ ಮೀಸಲಿಟ್ಟ ಸ್ಮಶಾನ ಜಾಗ ಭರ್ತಿಯಾಗಿದೆ, ಕೆಲವು ಬಡಾವಣೆಗಳ ಮಧ್ಯೆ ಸ್ಮಶಾನವಿರುವುದರಿಂದ ಮಾಲಿನ್ಯ ಹೆಚ್ಚಾಗಿ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಅದಕ್ಕೆ ಈ ಬಾರಿಯ ಬಜೆಟ್‌ನಲ್ಲಿ 40 ಕೋಟಿ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ನಗರದ ಹೊರವಲಯದಲ್ಲಿ ನೀಡಲಾದ ಸ್ಮಶಾನ ಜಾಗಗಳಲ್ಲಿ ಬೇಲಿ ಹಾಕಿ, ಮೂಲ ಸೌಕರ್ಯ ನೀಡುವ ಕೆಲಸ ಪ್ರಾರಂಭಿಸಲಾಗುತ್ತದೆ. ಪಾಲಿಕೆಯ ಶವ ಸಾಗಿಸುವ ವಾಹನಗಳು ಕಳಪೆ ಸ್ಥಿತಿಯಲ್ಲಿದ್ದು ಸುಧಾರಿಸಬೇಕಿದೆ. ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಸೂಕ್ತ ಸೌಲಭ್ಯಗಳನ್ನು ಪಾಲಿಕೆ ಮಾಡಿ ಕೊಡಬೇಕಿದೆ ಎಂದರು.
ನಗರದಲ್ಲಿ ಒಟ್ಟು 200 ರುದ್ರಭೂಮಿಗಳು, 12 ವಿದ್ಯುತ್ ಚಿತಾಗಾರಗಳಿವೆ. ವಿಲ್ಸನ್ ಗಾರ್ಡನ್, ಹರಿಶ್ಚಂದ್ರ ಘಾಟ್, ಶ್ರೀರಾಂಪುರ ಸ್ಮಶಾನಗಳು ಭರ್ತಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಿದ್ಯುತ್ ಚಿತಾಗಾರದಲ್ಲಿ ಶವಗಳನ್ನು ಸುಡಲಾಗ್ತಿದೆ. ಇನ್ನು ಒಂದೇ ಕುಟುಂಬಸ್ಥರಿದ್ದರೆ ಅದೇ ಜಾಗದಲ್ಲಿ ಹೂಳಲಾಗುತ್ತದೆ ಎಂದು ಸ್ಮಶಾನದಲ್ಲಿ ಕೆಲಸಮಾಡುವ ಕಾರ್ಮಿಕರಾದ ರಾಜಾ ಈಟಿವಿ ಭಾರತ್ ಗೆ ತಿಳಿಸಿದರು.