ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಗಳಲ್ಲಿ ಸರ್ಕಾರದ ಪರ ನ್ಯಾಯಾಲಯಗಳಲ್ಲಿ ವಾದಿಸಲು ವಕೀಲರಾದ ಪಿ. ಪ್ರಸನ್ನ ಕುಮಾರ್ ಸೇರಿದಂತೆ ಮೂವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯ (ಕಾನೂನು ಮತ್ತು ಸುವ್ಯವಸ್ಥೆ) ಕಾರ್ಯದರ್ಶಿ ಜಿ. ಶ್ಯಾಮ್ ಹೊಳ್ಳ ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಆಗಸ್ಟ್ 11ರ ರಾತ್ರಿ ನಡೆದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಗಲಭೆ ಸಂಬಂಧ ಕ್ರಮವಾಗಿ 50 ಹಾಗೂ 15 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳು ಅತ್ಯಂತ ಗಂಭೀರ ಮತ್ತು ಸಂಕೀರ್ಣವಾಗಿವೆ ಎಂದು ತಿಳಿಸಲಾಗಿದೆ.
ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಪರವಾಗಿ ವಾದಿಸಲು ಸೂಕ್ತ ವಕೀಲರನ್ನು ನಿಯೋಜಿಸುವಂತೆ ಕೋರಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪತ್ರ ಬರೆದಿದ್ದಾರೆ. ಅದರಂತೆ ಗಲಭೆ ಸಂಬಂಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಸರ್ಕಾರ ಹಾಗೂ ಗೃಹ ಇಲಾಖೆ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಲು ವಕೀಲರಾದ ಪಿ. ಪ್ರಸನ್ನಕುಮಾರ್, ಪಿ. ತೇಜಸ್ ಹಾಗೂ ಬಿ.ಓ. ಚಂದ್ರಶೇಖರ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ (ಎಸ್‍ಪಿಪಿ) ನಿಯೋಜಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ.
ಸಿಬಿಐ, ಎನ್ಐಎ ಹಾಗೂ ರಾಜ್ಯ ಸರ್ಕಾರದ ಪರ ಹಲವು ಪ್ರಕರಣಗಳಲ್ಲಿ ಸಮರ್ಥ ವಾದ ಮಂಡಿಸಿರುವ ಪಿ. ಪ್ರಸನ್ನ ಕುಮಾರ್ ಈಗಾಗಲೇ ಹಲವು ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗೆಯೇ ಪಿ. ತೇಜಸ್ ಮತ್ತು ಬಿ.ಓ ಚಂದ್ರಶೇಖರ್ ಕ್ರಿಮಿನಲ್ ಪ್ರಕರಣಗಳಲ್ಲಿ ಹೆಚ್ಚಿನ ಅನುಭವ ಹೊಂದಿದ್ದಾರೆ.