ಬೆಂಗಳೂರು: ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಜನಸಂಖ್ಯೆ ನಿಗದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಆ ಮೂಲಕ ತಾಪಂ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಮತ್ತಷ್ಟು ವಿಳಂಬವಾಗಲಿದೆ.
ಕ್ಷೇತ್ರಗಳ ಜನಸಂಖ್ಯೆ ಬಗ್ಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ಕಳೆದ ಮಾರ್ಚ್‌ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಇದೀಗ ಈ ತಿದ್ದುಪಡಿ ಕಾಯ್ದೆಯ ಸೆಕ್ಷನ್ 121 ಮತ್ತು ಸೆಕ್ಷನ್ 160ರ ತಿದ್ದುಪಡಿಗೆ ಸುಗ್ರೀವಾಜ್ಞೆ ತರಲಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ತಿದ್ದುಪಡಿ ಅಧ್ಯಾದೇಶಕ್ಕೆ ಆ. 20ರಂದು ರಾಜ್ಯಪಾಲರಿಂದ ಅಂಕಿತ ಬಿದ್ದಿದ್ದು, ಇದೀಗ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಅಧಿಸೂಚನೆ ಹೊರಡಿಸಿದೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ಆಗಸ್ಟ್ 25 ರಂದು ಮತದಾರರ ಕರಡು ಪಟ್ಟಿ ಪ್ರಕಟ
ತಿದ್ದುಪಡಿ ಕಾಯ್ದೆಗೆ ತರುತ್ತಿರುವ ಸುಗ್ರೀವಾಜ್ಞೆಯಂತೆ 7 ಲಕ್ಷ ಜನಸಂಖ್ಯೆಗೆ ಕನಿಷ್ಠ 25 ಜಿ.ಪಂ. ಸದಸ್ಯರಿರಲಿದ್ದಾರೆ. ಇನ್ನು 7 ರಿಂದ 9.5 ಲಕ್ಷ ಜನಸಂಖ್ಯೆಗೆ ಕನಿಷ್ಠ 28 ಜಿ.ಪಂ ಸದಸ್ಯರು ಇರಲಿದ್ದಾರೆ. ತಾ.ಪಂ ಹಾಗೂ ಜಿ.ಪಂ ಕ್ಷೇತ್ರಗಳ ಜನಸಂಖ್ಯೆ ಬಗ್ಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2022 ತರಲಾಗಿತ್ತು.
ಅದರಂತೆ, ಸೆಕ್ಷನ್ 121 ಪ್ರಕಾರ 2 ಲಕ್ಷ ಗ್ರಾಮೀಣ ಜನಸಂಖ್ಯೆ ಹೊಂದಿರುವ ತಾಲೂಕುಗಳಲ್ಲಿ ಪ್ರತಿ 12 ಸಾವಿರಕ್ಕೆ ಕಡಿಮೆಯಿಲ್ಲದ ಜನಸಂಖ್ಯೆಗೆ ಒಬ್ಬ ತಾ.ಪಂ. ಸದಸ್ಯ ಇರಬೇಕು. ಅದೇ ರೀತಿ 1 ಲಕ್ಷ ಮೀರಿದ ಹಾಗೂ 2 ಲಕ್ಷ ಮೀರದ ಗ್ರಾಮೀಣ ಜನಸಂಖ್ಯೆ ಹೊಂದಿರುವ ತಾಲೂಕುಗಳಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ ಒಬ್ಬ ತಾ.ಪಂ. ಸದಸ್ಯರಂತೆ ಕನಿಷ್ಠ 11 ಚುನಾಯಿತ ಸದಸ್ಯರು ಇರಬೇಕು.
50 ರಿಂದ 1 ಲಕ್ಷ ಜನಸಂಖ್ಯೆಗೆ ಒಂಬತ್ತು ಸದಸ್ಯರು. 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಗೆ ಏಳು ಮಂದಿ ಸದಸ್ಯರು ಇರಬೇಕು. ಅದೇ ರೀತಿ ಸೆಕ್ಷನ್ 160 ಪ್ರಕಾರ, ಒಂದು ಜಿಲ್ಲೆಯಲ್ಲಿ 35 ರಿಂದ 45 ಸಾವಿರ ಜನಸಂಖ್ಯೆಗೆ ಒಬ್ಬರಂತೆ ಒಂದು ಜಿಲ್ಲೆಯಲ್ಲಿ 20 ಜಿ.ಪಂ. ಸದಸ್ಯರು ಇರಬೇಕು.
ಇದನ್ನೂ ಓದಿ: ತಾಲೂಕು, ಜಿಲ್ಲಾ ಪಂಚಾಯತ್, ವಿಧಾನಸಭೆ ಚುನಾವಣೆಗೆ ಸಿದ್ಧತೆ: ಬೆಂಗಳೂರಿನಲ್ಲಿ ಜೆಡಿಎಸ್ ಸರಣಿ ಸಭೆ
2022ರ ಮಾರ್ಚ್‌ನಲ್ಲಿ ತರಲಾದ ತಿದ್ದುಪಡಿಯಲ್ಲಿ 2 ಲಕ್ಷ ಮೇಲ್ಪಟ್ಟ ಜನಸಂಖ್ಯೆಗೆ 12 ತಾ.ಪಂ ಸ್ಥಾನಗಳು ಎಂದು ಇತ್ತು. ಆದರೆ, 2 ಲಕ್ಷದ ಮೇಲೆ ಸ್ವಲ್ಪ ಪ್ರಮಾಣದ ಜನಸಂಖ್ಯೆ ಹೆಚ್ಚಿರುವ ಕಡೆ ಸ್ಥಾನಗಳ ನಿಗದಿಗೆ ಸಮಸ್ಯೆ ಆಗುತ್ತಿತ್ತು. ಅದಕ್ಕಾಗಿ ಸುಗ್ರೀವಾಜ್ಞೆಯಲ್ಲಿ 2 ಲಕ್ಷದ ಬದಲಾಗಿ 2.30 ಲಕ್ಷ ಜನಸಂಖ್ಯೆ ನಿಗದಿ ಪಡಿಸಲಾಗಿದೆ.
ಅದೇ ರೀತಿ ಹಿಂದಿನ ತಿದ್ದುಪಡಿಯಲ್ಲಿ ಒಂದು ಜಿಲ್ಲೆಯಲ್ಲಿ ತಾಲೂಕುಗಳಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಪ್ರತಿ ಜಿಲ್ಲೆಯಲ್ಲಿ 20 ಇರಬೇಕು ಎಂದಿತ್ತು. ಇಲ್ಲಿಯೂ ಸಹ ಕಡಿಮೆ ಜನಸಂಖ್ಯೆ ಇರುವ ಜಿಲ್ಲೆಗಳಲ್ಲಿ ಸ್ಥಾನ ನಿಗದಿ ಸಮಸ್ಯೆ ಆಗುತಿತ್ತು. ಅದಕ್ಕಾಗಿ, ಸುಗ್ರೀವಾಜ್ಞೆಯಲ್ಲಿ ಜಿಲ್ಲೆಗಳಿಗೆ ಜನಸಂಖ್ಯೆ ನಿಗದಿಪಡಿಸಲು ಈ ಸುಗ್ರೀವಾಜ್ಞೆ ತರಲಾಗಿದೆ.
ಈ ಸುಗ್ರೀವಾಜ್ಞೆ ಮೂಲಕ ಇದೀಗ ಸರ್ಕಾರ ತಾಪಂ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಇನ್ನಷ್ಟು ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ. ಕಾರಣ ಸುಗ್ರಿವಾಜ್ಞೆಯ ಪ್ರಕಾರ ತಾ.ಪಂ. ಹಾಗೂ ಜಿ.ಪಂ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ. ಇದು ಮುಂದೆ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ.