ಬೆಂಗಳೂರು: ಸಿಎಂ ಬೊಮ್ಮಾಯಿ ನಿನ್ನೆ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಆರ್ಥಿಕ ಸಂಕಷ್ಟದ ಹಿನ್ನೆಲೆ ಹಿತಮಿತವಾದ ಬಜೆಟ್ ಮಂಡಿಸಿದ್ದಾರೆ. ಆದರೆ ಪ್ರತಿ ಬಜೆಟ್ನಲ್ಲೂ ಬದ್ಧ ವೆಚ್ಚ ಗಣನೀಯ ಏರಿಕೆಯಾದರೆ, ಇತ್ತ ಆಸ್ತಿಗಳನ್ನು ಸೃಷ್ಟಿಸುವ ಬಂಡವಾಳ ವೆಚ್ಚದ ಮೇಲಿನ ಖರ್ಚು ಕಡಿಮೆಯಾಗುತ್ತಲೇ ಇದೆ.
ಸಿಎಂ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ತಮ್ಮ ಮುಂಗಡ ಪತ್ರದಲ್ಲಿ ಯಾವುದೇ ಜನಪ್ರಿಯ ದೊಡ್ಡ ಯೋಜನೆಗಳನ್ನು ಘೋಷಿಸಿಲ್ಲವಾದರೂ ಯಾವುದೇ ಹೊರೆಯಾಗದ ಬಜೆಟ್ ಮಂಡಿಸಿದ್ದಾರೆ. ಆರ್ಥಿಕತೆಯ ಇತಿಮಿತಿಯಯನ್ನು ಗಮನದಲ್ಲಿರಿಸಿಕೊಂಡು ಸಿಎಂ ಹಿತಮಿತದ ಬಜೆಟ್ ಮಂಡಿಸಿದ್ದಾರೆ ಎಂದರೆ ತಪ್ಪಾಗಲಾರದು.
ಬಜೆಟ್ನಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಚೇತರಿಕೆಯ ಹಾದಿಯಲ್ಲಿದ್ದು, ಇನ್ನೂ ಯಥಾಸ್ಥಿತಿಗೆ ಮರಳಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಮತ್ತೆ ರಾಜಸ್ವ ಕೊರತೆಯ ಬಜೆಟ್ ಮಂಡಿಸಲಾಗಿದೆ. ಆದಾಯ ಸಂಗ್ರಹಕ್ಕಿಂತ ವೆಚ್ಚವೇ ಹೆಚ್ಚಾಗಿರುವುದು ಮುಂದುವರಿದಿದೆ. ಅದರಲ್ಲೂ ವೇತನ, ಪಿಂಚಣಿ, ಸಹಾಯಧನಗಳನ್ನೊಳಗೊಂಡ ಬದ್ಧ ವೆಚ್ಚ ಮತ್ತಷ್ಟು ಏರಿಕೆಯಾಗಿದೆ. ಹೀಗಾಗಿ ಬಂದ ಆದಾಯ ಬದ್ಧ ವೆಚ್ಚಕ್ಕೇ ವ್ಯಯವಾಗುತ್ತಿದೆ. ಇತ್ತ ಬಂಡವಾಳ ವೆಚ್ಚ ಭರಿಸಲು ಸಾಲದ ಮೊರೆ ಹೋಗಲಾಗುತ್ತಿದೆ. ಹೀಗಾಗಿನೇ ಸಾಲದ ಪ್ರಮಾಣದಲ್ಲಿ ಜಿಗಿತ ಕಾಣುತ್ತಲೇ ಇದೆ.
ಕುಗ್ಗುತ್ತಿರುವ ಬಂಡವಾಳ ವೆಚ್ಚದ ಮೇಲಿನ ಖರ್ಚು: ಬಂಡವಾಳ ವೆಚ್ಚ ಕಟ್ಟಡ, ರಸ್ತೆ, ಸೇತುವೆ ಮುಂತಾದ ಸ್ಥಿರ ಮೂಲಸೌಕರ್ಯ ಆಸ್ತಿಗಳ ಸೃಷ್ಟಿಸಲು ವ್ಯಯಿಸಲಾಗುತ್ತದೆ. ಅಂದರೆ ಅಭಿವೃದ್ಧಿ ಕಾಮಗಾರಿಗಳಿಗೆ ಮಾಡುವ ವೆಚ್ಚಗಳನ್ನು ಬಂಡವಾಳ ವೆಚ್ಚ ಎನ್ನಲಾಗುತ್ತದೆ.
ರಾಜ್ಯದ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬಂಡವಾಳ ವೆಚ್ಚ ಅತ್ಯಗತ್ಯವಾಗಿದೆ. ಬಂಡವಾಳ ವೆಚ್ಚದ ಮೇಲೆ ಹೆಚ್ಚು ಖರ್ಚು ಮಾಡಿದರೆ ರಾಜ್ಯದ ಮೂಲಸೌಕರ್ಯ ಬಲವರ್ಧನೆಯಾಗುತ್ತದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಬಂಡವಾಳ ವೆಚ್ಚದ ಮೇಲಿನ ಖರ್ಚು ಕುಗ್ಗುತ್ತಲೇ ಇದೆ. ಇದರಿಂದ ರಾಜ್ಯದ ಅಭಿವೃದ್ಧಿ ಕೆಲಸಗಳ ಮೇಲಿನ ಖರ್ಚುಗಳು ಕಡಿಮೆಯಾಗುತ್ತಿವೆ.
2015-16 ರಿಂದ 2017-18ರ ಅವಧಿಯಲ್ಲಿ ಬಜೆಟ್ನಲ್ಲಿ ಅಂದಾಜು ಮಾಡಲಾದ ಬಂಡವಾಳ ವೆಚ್ಚಕ್ಕಿಂತ ವಾಸ್ತವ ಖರ್ಚು ಹೆಚ್ಚಾಗಿತ್ತು. ಅಂದರೆ ಹೆಚ್ಚಿನ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತಿತ್ತು. ಆದರೆ, 2018-19 ರಿಂದೀಚೆಗೆ ಬಜೆಟ್ ಅಂದಾಜಿಗಿಂತ ಕಡಿಮೆ ಪ್ರಮಾಣದಲ್ಲಿ ಬಂಡವಾಳ ವೆಚ್ಚದ ಮೇಲೆ ಖರ್ಚು ಮಾಡಲಾಗುತ್ತಿದೆ.
ಇದರಿಂದ ರಾಜ್ಯದಲ್ಲಿನ ರಸ್ತೆ, ಕಟ್ಟಡ ಇತರೆ ಮೂಲಸೌಕರ್ಯ ಸೃಷ್ಟಿಸುವ ಕಾಮಗಾರಿ ಮೇಲಿನ ಖರ್ಚು ಗಣನೀಯವಾಗಿ ಕುಗ್ಗುತ್ತಲೇ ಇದೆ. ಆದಾಯ ಸಂಗ್ರಹದ ಸಂಪೂರ್ಣ ಹಣ ಬದ್ಧ ವೆಚ್ಚಕ್ಕೆ ವ್ಯಯವಾಗುತ್ತಿದೆ. ಹೀಗಾಗಿ ಬಂಡವಾಳ ವೆಚ್ಚದ ಮೇಲಿನ ಖರ್ಚು ವರ್ಷಂಪ್ರತಿ ಕಡಿಮೆ ಮಾಡಲಾಗುತ್ತಿದೆ.
ಇಳಿಕೆಯಾಗುತ್ತಿರುವ ಬಂಡವಾಳ ವೆಚ್ಚದ ಅಂಕಿ ಅಂಶ:
- 2015-16: ಬಜೆಟ್ ಅಂದಾಜು ಬಂಡವಾಳ ವೆಚ್ಚ- 20,655 ಕೋಟಿ, ವಾಸ್ತವ ಖರ್ಚು ಮಾಡಿದ್ದು- 21,370 ಕೋಟಿ ರೂ.
- 2016-17: ಬಜೆಟ್ ಅಂದಾಜು ಬಂಡವಾಳ ವೆಚ್ಚ- 26,341 ಕೋಟಿ, ವಾಸ್ತವ ಖರ್ಚು ಮಾಡಿದ್ದು- 30,084 ಕೋಟಿ ರೂ.
- 2017-18: ಬಜೆಟ್ ಅಂದಾಜು ಬಂಡವಾಳ ವೆಚ್ಚ- 33,630 ಕೋಟಿ, ವಾಸ್ತವ ಖರ್ಚು ಮಾಡಿದ್ದು- 35,760 ಕೋಟಿ ರೂ.
- 2018-19: ಬಜೆಟ್ ಅಂದಾಜು ಬಂಡವಾಳ ವೆಚ್ಚ- 41,063 ಕೋಟಿ, ವಾಸ್ತವ ಖರ್ಚು ಮಾಡಿದ್ದು- 39,146 ಕೋಟಿ ರೂ.
- 2019-20: ಬಜೆಟ್ ಅಂದಾಜು ಬಂಡವಾಳ ವೆಚ್ಚ- 42,584 ಕೋಟಿ, ವಾಸ್ತವ ಖರ್ಚು ಮಾಡಿದ್ದು- 39,599 ಕೋಟಿ ರೂ.
- 2020-21: ಬಜೆಟ್ ಅಂದಾಜು ಬಂಡವಾಳ ವೆಚ್ಚ- 46,512 ಕೋಟಿ, ವಾಸ್ತವ ಖರ್ಚು ಮಾಡಿದ್ದು- 35,449 ಕೋಟಿ ರೂ.
- 2021-22: ಬಜೆಟ್ ಅಂದಾಜು ಬಂಡವಾಳ ವೆಚ್ಚ- 44,237 ಕೋಟಿ, ವಾಸ್ತವ ಖರ್ಚು ಮಾಡಿದ್ದು(ಜನವರಿ)- 26,915 ಕೋಟಿ ರೂ.