ಬೆಂಗಳೂರು: ಕೋವಿಡ್-19 ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕುರುಡನ ಮುಂದೆ ಆನೆ ನಿಲ್ಲಿಸಿ ಆನೆ ಹೇಗಿದೆ ಅಂತ ಕೇಳುವಂತಾಗಿದೆ ಸರ್ಕಾರದ ಸ್ಥಿತಿ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೋವಿಡ್ನಿಂದ ಸತ್ತವರನ್ನು ಜೆಸಿಬಿಗಳಲ್ಲಿ ಕೊಂಡೊಯ್ದು ಸಮಾಧಿ ಮಾಡುವ ಸ್ಥಿತಿ ಇದೆ. ಭಾರತದ ಇತಿಹಾಸದಲ್ಲಿ ಎಂದೂ ಇಂಥಹ ಸ್ಥಿತಿ ಬಂದಿರಲಿಲ್ಲ. ಕೊರೊನಾ ಹರಡುತ್ತೆ ಎಂದು ನಾಲ್ಕು ತಿಂಗಳ ಹಿಂದೆಯೇ ಹೇಳಿದ್ದೆ. ಹಾಗೆಯೇ ಸರ್ಕಾರ ಲಾಕ್ಡೌನ್ ಮಾಡಿದಾಗ ಬಡವರಿಗೆ ಘೋಷಿಸಿದ ಪರಿಹಾರ ನೀಡಿಲ್ಲ ಎಂದರು.
ಬೆಂಗಳೂರಿಗೆ ನಾಲ್ಕು ಐದೈದು ಉಸ್ತುವಾರಿ ಮಾಡಿದರೆ ಸಮನ್ವಯತೆ ಹೇಗೆ ಸಾಧ್ಯ? ಅಧಿಕಾರಿಗಳು ಯಾರ ಮಾತು ಕೇಳಬೇಕು? ಮಾಧ್ಯಮಗಳಿಗೆ ಮನವಿ ಮಾಡ್ತೇನೆ, ನೀವು ಸೋಂಕಿತರನ್ನು ತೋರಿಸುತ್ತಿದ್ದೀರಿ. ಹಾಗೆ ವಾಸಿಯಾಗಿ ಬಂದವರನ್ನೂ ತೋರಿಸಿ. ಜನ ನಿಮ್ಮನ್ನು ನಂಬುತ್ತಿದ್ದಾರೆ. ರಾಜಕಾರಣಿಗಳನ್ನು ಜನ ನಂಬಲ್ಲ. ಹೀಗಾಗಿ ಮಾಧ್ಯಮಗಳು ಜನರ ನಂಬಿಕೆ ಉಳಿಸಿಕೊಳ್ಳಿ ಎಂದರು.
ಇನ್ನು ಯಾರೂ ಸಹ ಆಯುರ್ವೇದದಲ್ಲಿ ಕೋವಿಡ್ ಔಷಧಿ ಕಂಡು ಹಿಡಿದಿಲ್ಲ. ಇಮ್ಯುನಿಟಿ ಜಾಸ್ತಿ ಮಾಡುವದಷ್ಟೇ ಹೊರತು ಕೋವಿಡ್ ಔಷಧಿ ಅಂತ ಕೊಡಬೇಡಿ. ಸೆಕ್ಸುವಲ್ ಟ್ಯಾಬ್ಲೆಟ್ ಕೊಟ್ಟು ಇಮ್ಯುನಿಟಿ ಬಿಲ್ಡಿಂಗ್ ಟ್ಯಾಬ್ಲೆಟ್ ಅಂತ ಹೇಳ್ತಿದ್ದಾರೆ. ಜನರಿಗೆ ಟೋಪಿ ಹಾಕಬೇಡಿ. ಸರ್ಕಾರದ ವೈಫಲ್ಯದ ವಿರುದ್ಧ ಈಗ ಜನ ಸೇರಿಸಿ ಹೋರಾಟ ಮಾಡಲಾಗದು. ಆದರೆ ಸರ್ಕಾರ ಸ್ಪಂದಿಸದಿದ್ದರೆ ಗಾಂಧಿ ಪ್ರತಿಮೆ ಎದುರು ಧರಣಿ ಮಾಡ್ತೇವೆ ಎಂದು ತಿಳಿಸಿದರು.
ಲಾಕ್ಡೌನ್ ತೆಗೆದಿರೋದ್ರಿಂದ ಅಂತರ ಕಾಪಾಡಿಕೊಂಡು ನಮಾಜ್ ಮಾಡಲು ಅವಕಾಶ ಇದೆಯೇ? ಸರ್ಕಾರ ತಿಳಿಸಲಿ. ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ನ ಎಲ್ಲಾ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ನೀಡಲು ಕ್ರಮವಹಿಸಿ ಎಂದು ಸರ್ಕಾರಕ್ಕೆ ಇಬ್ರಾಹಿಂ ಸಲಹೆ ನೀಡಿದರು.