ಬೆಂಗಳೂರು: ಕೊರೊನಾ ಯಾವುದೇ ಪಕ್ಷದ, ಸರ್ಕಾರದ ಕಾಯಿಲೆ ಅಲ್ಲ. ಇದು ಇಡೀ ವಿಶ್ವದ ಕಾಯಿಲೆಯಾಗಿದೆ. ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಸರ್ಕಾರ ಇದರಲ್ಲಿ ವಿಫಲವಾದರೆ, ಪ್ರತ್ಯೇಕ ನಿಯೋಗವನ್ನು ಕರೆದೊಯ್ದು ರಾಜ್ಯಪಾಲರನ್ನು ಮತ್ತು ಸಿಎಂರನ್ನು ಭೇಟಿ ಮಾಡಬೇಕಾಗುತ್ತದೆ ಎಂದರು.
ಸಮರ್ಪಕ ಕಾರ್ಯ ಯೋಜನೆ ಮಾಡುವಲ್ಲಿ ಸರ್ಕಾರ ಎಡವಿದೆ. ಇನ್ನೂ ಜಿಲ್ಲಾಧಿಕಾರಿಗಳಿಗೆ ಹಣ ಹೋಗಿಲ್ಲ. ವೈದ್ಯರು ಕಂಗಾಲಾಗಿದ್ದಾರೆ. ವೈದ್ಯಕೀಯ ರಕ್ಷಣಾ ಸಲಕರಣೆಗಳ ಕೊರತೆ ಇದೆ. ಈ ಬಗ್ಗೆ ಸರ್ಕಾರ ಶೀಘ್ರ ಕ್ರಮಕೈಗೊಳ್ಳಬೇಕು. ಮಹಾಮಾರಿ ನಿಯಂತ್ರಣ ಸಂಬಂಧ ನಮ್ಮ ಸಂಪೂರ್ಣ ಸಹಕಾರ ಸರ್ಕಾರಕ್ಕಿರುತ್ತೆ ಎಂದರು.
ಟಾಸ್ಕ್ ಪೋರ್ಸ್ ರಚನೆ : ಕೊರೊನಾ ಸಂಬಂಧ ಮಾಜಿ ಆರೋಗ್ಯ ಸಚಿವ ರಮೇಶ್ ಕುಮಾರ್ ನೇತೃತ್ವದಲ್ಲಿ ಪಕ್ಷ ಕಾರ್ಯಪಡೆ ರಚಿಸಲಿದೆ. ಈ ಕಾರ್ಯಪಡೆ ಕೊರೊನಾ ಸಂಬಂಧಿತ ಕೇಂದ್ರ ಸರ್ಕಾರದ ಕಾರ್ಯಕ್ರಮ, ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಪಕ್ಷದ ಕಾರ್ಯಕರ್ತರು ಯಾವ ರೀತಿ ಕಾರ್ಯನಿರ್ವಹಿಸಬೇಕೆಂಬ ವಿಚಾರಗಳ ಬಗ್ಗೆ ಪಕ್ಷದ ಗಮನಕ್ಕೆ ತರಲಿದೆ ಎಂದರು.
ಕೊರೊನಾ ಸಂಕಷ್ಟದ ಹಿನ್ನೆಲೆ ಪ್ರತಿ ಕಾಂಗ್ರೆಸ್ ಶಾಸಕರು, ಎಂಎಲ್ಸಿಗಳು ಕನಿಷ್ಠ 1 ಲಕ್ಷ ರೂ. ಪರಿಹಾರ ಮೊತ್ತವನ್ನು ಕೆಪಿಸಿಸಿಗೆ ನೀಡಲು ಸೂಚಿಸಲಾಗಿದೆ. ಜೊತೆಗೆ ಸ್ಥಳೀಯ, ಜಿಲ್ಲೆ,ಬ್ಲಾಕ್ ಮಟ್ಟದ ಪದಾಧಿಕಾರಿಗಳು ತಮಗೆ ಸಾಧ್ಯವಾಗುವಷ್ಟರ ಮಟ್ಟಿಗೆ ನೆರವು ನೀಡಲು ಮನವಿ ಮಾಡಿದ್ದೇವೆ ಎಂದರು.