ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದಲ್ಲಿರುವ ಇತರೆ ಮಹಾನಗರ ಪಾಲಿಕೆಗಳು ಮತ್ತು ಸ್ಥಳೀಯ ಸಂಸ್ಥೆಗಳ ನಿಯಂತ್ರಣಕ್ಕೆ ಒಳಪಟ್ಟ 1,873 ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವ ಕೊಳಚೆ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ನಿಗದಿಪಡಿಸಿದ್ದ ದರಗಳನ್ನು ಕಡಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳ ವಿಸ್ತೀರ್ಣದವರೆಗೂ 4,000 ರೂ. (ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಜನಾಂಗದವರಿಗೆ 2,000 ರೂ.) ಏಕರೂಪದ ದರಗಳನ್ನು ನಿಗದಿಗೊಳಿಸಲಾಗಿದೆ. ಈ ಹಿಂದೆ ಈ ದರ 10,000 ರೂ. ಮತ್ತು 5,000 ರೂ.ಆಗಿತ್ತು.
ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳ ವಿಸ್ತೀರ್ಣದವರೆಗೂ ಈ ಹಿಂದೆ ಇದ್ದ 4,000 ರೂ. (ಪಜಾ-ಪಂ 2,000) ದರವನ್ನು ಕಡಿಮೆ ಮಾಡಿ 2,000 ರೂ. ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಜನಾಂಗದವರಿಗೆ 1,000 ರೂ. ನಿಗದಿಗೊಂಡಿದೆ. ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಕ್ಕುಪತ್ರಗಳನ್ನು ಪಡೆಯಲು 1,200 ಚದರ ಅಡಿಗಳವರೆಗೆ 2,000 ರೂ. ನಿಗದಿ ಪಡಿಸಿದ್ದು, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಜನಾಂಗದವರು 1,000 ರೂ. ಪಾವತಿ ಮಾಡಬೇಕಾಗುತ್ತದೆ. ಈ ಹಿಂದೆ ಈ ದರಗಳು ಕ್ರಮವಾಗಿ 3,000 ರೂ. ಹಾಗೂ 1,500 ರೂ. ಆಗಿತ್ತು.
ಹಕ್ಕುಪತ್ರಗಳನ್ನು ಪಡೆದುಕೊಳ್ಳಲು ಈ ಹಿಂದೆ ನಿಗದಿ ಪಡಿಸಿದ್ದ ದರಗಳು ಹೆಚ್ಚಾಗಿದ್ದು, ಬಡ ಕುಟುಂಬಗಳ ಹೊರೆಯನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ದರಗಳನ್ನು ಕಡಿಮೆ ಮಾಡಲು ಮುಖ್ಯಮಂತ್ರಿಗಳನ್ನು ಕೋರಲಾಗಿತ್ತು. ಇದೀಗ ದರ ಕಡಿಮೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಎರಡೂ ಕಿಡ್ನಿ ವೈಫಲ್ಯ; ಕಿಡ್ನಿ ಕೊಡಲು ಮುಂದಾದ ಹೆತ್ತವ್ವಳ ಬಳಿ ಚಿಕಿತ್ಸೆಗಿಲ್ಲ ಹಣ