ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರದ (ಬಿಬಿಎಂಪಿ) ವಾರ್ಡ್ಗಳ ಮರುವಿಂಗಡಣೆ ಮಾಡಲು ಚಿಂತನೆ ನಡೆಸಿರುವ ರಾಜ್ಯ ಸರ್ಕಾರ, ಈ ಬಗ್ಗೆ ನಾಳೆ ನಡೆಯಲಿರುವ ಜಂಟಿ ಸದನ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿಯವರು, ಸದ್ಯ 198 ವಾರ್ಡ್ ಗಳಿದ್ದು, ಇದನ್ನು 225 ವಾರ್ಡ್ ಗೆ ಹೆಚ್ಚಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ ಎಂದರು.
ನಗರದಲ್ಲಿ 40 ರಿಂದ 47 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ವಿಂಗಡಣೆ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಪ್ರಸ್ತುತ ಬಿಬಿಎಂಪಿಯಲ್ಲಿ 8 ವಲಯಗಳಿದ್ದು, ಇದನ್ನು 15 ಕ್ಕೆ ಹೆಚ್ಚಿಸುವ ಬಗ್ಗೆಯೂ ಚರ್ಚೆ ಆಗಿದೆ. ಈಗಾಗಲೇ ವಾರ್ಡ್ ವಿಂಗಡಣೆ ವಿಚಾರ ಕೋರ್ಟ್ನಲ್ಲಿದೆ. ನಾಳಿನ ಸದನ ಸಮಿತಿ ಸಭೆ ಬಳಿಕ ಹಾಲಿ ವಾರ್ಡ್ ಪ್ರಕಾರವೇ ಚುನಾವಣೆಗೆ ಹೋಗಬೇಕಾ? ಅಥವಾ ವಾರ್ಡ್ ಮರುವಿಂಗಡಣೆ ಬಳಿಕ ಚುನಾವಣೆಗೆ ಹೋಗಬೇಕಾ? ಎಂಬುದನ್ನು ನಿರ್ಧರಿಸುತ್ತೇವೆ ಎಂದು ತಿಳಿಸಿದರು.
ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಈಗ ವಾರ್ಡ್ ಹೆಚ್ಚಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದ ಸಚಿವರು, ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಇನ್ನು ನಾವು ಕೋರ್ಟ್ ಗೆ ಏನು ಹೇಳಿಲ್ಲ ಎಂದರು.
ಕರ್ನಾಟಕದ ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಶಿಕ್ಷಣ:
ರಾಜ್ಯದ 276 ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಲು ತೀರ್ಮಾನಿಸಲಾಗಿದೆ. ಈ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗಲಿದೆ. ಇದಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಶಿಕ್ಷಣ ನೀಡುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
108 ಆಂಬ್ಯುಲೆನ್ಸ್ ಸರ್ವಿಸ್ ಮಾಡಲು ಟೆಂಡರ್ ಕರೆಯಲು ಕೋರ್ಟ್ ಸೂಚನೆ ಇತ್ತು. ಹೀಗಾಗಿ ಟೆಂಡರ್ ಕರೆದಿದ್ದೇವೆ. ರೋಗಿ ಹೇಳಿದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಈಗ ಆಂಬ್ಯುಲೆನ್ಸ್ ವ್ಯವಸ್ಥೆಗೆ ಕಿಲೋಮೀಟರ್ ವ್ಯಾಪ್ತಿಯಿಲ್ಲ. ಮೊದಲು 39 ಕಿ.ಮೀ ವ್ಯಾಪ್ತಿ ಇತ್ತು. ಈಗ ಆ ನಿಯಮ ತೆಗೆಯಲಾಗಿದೆ. ರೋಗಿಗೆ ಅನುಕೂಲವಾಗುವ ಆಸ್ಪತ್ರೆಗೆ ಸೇರಿಸಲು ಆಂಬ್ಯುಲೆನ್ಸ್ ಹೋಗಬೇಕು ಎಂದು ಹೇಳಿದರು.
ಡಿಜಿಟಲ್ ಕೋರ್ಸ್:
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಡಿಜಿಟಲ್ ತರಬೇತಿ ಕೋರ್ಸ್ ಆರಂಭಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನೂತನ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-25 ಜಾರಿ ಮಾಡಲು ಸಂಪುಟ ತೀರ್ಮಾನ ಮಾಡಿದೆ. ಇದರಿಂದ 60 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ. ಬೆಂಗಳೂರು, ಬೆಂಗಳೂರು ಹೊರವಲಯ ಹೊರತುಪಡಿಸಿ ಬೇರೆ ಕಡೆಗಳ ಸ್ಟಾಂಪ್ ಡ್ಯೂಟಿಗೆ ಶೇ.100 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಬೆಂಗಳೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಬಂಡವಾಳ ಹೂಡಿಕೆಗೆ 10 ಕೋಟಿ ಸರ್ಕಾರಿ ಭದ್ರತೆಯಿಂದ ವಿನಾಯಿತಿ. ವರ್ಕ್ ಫ್ರಂ ಹೋಂಗೆ ಇಂಟರ್ನೆಟ್ ಸುಧಾರಣೆಗೆ 5ಜಿ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದರು.
ಹಲವು ವಿಧೇಯಕಗಳಿಗೆ ಅನುಮೋದನೆ:
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ )ವಿಧೇಯಕ 2020, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ 2020, ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್(ಎರಡನೇ ತಿದ್ದುಪಡಿ) ವಿಧೇಯಕ 2020ಕ್ಕೆ ಕರ್ನಾಟಕ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-25ಕ್ಕೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.
ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಅನುಷ್ಠಾನ ಸಂಬಂಧ ಕ್ಲಸ್ಟರ್ ವಾರು ವಿಮಾ ಸಂಸ್ಥೆಗಳನ್ನು ಮರು ನಿಗದಿಪಡಿಸಲಾಗುತ್ತದೆ.
ಕೇಂದ್ರ ಪುರಸ್ಕೃತ ಯೋಜನೆಯಡಿ ಹಾವೇರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ. ಅದೇ ರೀತಿ ಯಾದಗಿರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯ ಪ್ರವಾಸಿ ಮಂದಿರದ ಆವರಣದಲ್ಲಿ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 13. 08 ಕೋಟಿ ರೂ.ಗಳಿಗೆ ಅನುಮೋದನೆ ದೊರೆತಿದೆ. ವಿದ್ಯುನ್ಮಾನ ವ್ಯವಸ್ಥೆಗಳ ವಿನ್ಯಾಸ ಮತ್ತು ತಯಾರಿಕೆ ವಲಯಕ್ಕಾಗಿ ವಿಶೇಷ ಪ್ರೋತ್ಸಾಹಕ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಅಡಿಯಲ್ಲಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿ ಸಲಹೆಗಳನ್ನು 77 ಯೋಜನೆಗಳ ಪೈಕಿ 25 ಯೋಜನೆಗಳಿಗೆ ದರ ಹೊಂದಾಣಿಕೆ ಮಾಡುವುದು. ರಾಜ್ಯದಲ್ಲಿ ಜಲಾನಯನ ಯೋಜನೆಗಳನ್ನು ವಿಶ್ವಬ್ಯಾಂಕ್ ನೆರವಿನೊಂದಿಗೆ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಐದು ಗ್ರಾಮ ಪಂಚಾಯತ್‌ಗಳಲ್ಲಿ ಬರುವ 84 ಸಣ್ಣನೀರಾವರಿ/ಜಿಲ್ಲಾ ಪಂಚಾಯತ್ ಕೆರೆಗಳನ್ನು ಬೇಡ್ತಿ ನದಿಯ ಉಪನದಿಯಾದ ಕವಳಗಿ ಹಳ್ಳದಿಂದ ತುಂಬಿಸುವ ಯೋಜನೆಯ 225 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗೆ ಉಡುಪಿ ತಾಲೂಕಿನ ಕುತ್ತಾಡಿ ಗ್ರಾಮದಲ್ಲಿರುವ ವಿವಿಧ ಸರ್ವೆ ನಂಬರ್ ಗಳಲ್ಲಿ 10.7 ಎಕರೆ ಜಮೀನಿಗೆ ಗುತ್ತಿಗೆ ದರ ಮಾರ್ಪಾಡು ಮಾಡಲು ಒಪ್ಪಿಗೆ ನೀಡಲಾಗಿದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಅಪರ ನಿಬಂಧಕರ ಹುದ್ದೆಗಳಿಗೆ ನಿವೃತ್ತ ನ್ಯಾಯಾಧೀಶರಾದ ಹೆಚ್. ಜಿ. ವಿಜಯಕುಮಾರ್ ಹಾಗೂ ಅಮರನಾರಾಯಣ ಒಂದು ವರ್ಷದ ಅವಧಿಗೆ ನೇಮಕ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.
ಈ ಬಾರಿಯ ಅಧಿವೇಶನದಲ್ಲಿ ಹೆಚ್ಚು ಬಿಲ್ಗಳು ಬರುತ್ತವೆ. ಅಧಿವೇಶನದಲ್ಲಿ ಮಂಡಿಸಬೇಕಿರುವುದರಿಂದ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಬಿಲ್ ಪಾಸ್ ಮಾಡಲಾಗುವುದು ಎಂದರು. ಡ್ರಗ್ಸ್ ಗೆ ಸಂಬಂಧಿಸಿದ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.