ಬೆಂಗಳೂರು: ಪೇ ಸಿಎಂ ಅಭಿಯಾನದಿಂದ ಮುಜುಗರಕ್ಕೀಡಾಗಿರುವ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆಯ ಅಭಿಯಾನ ನಡೆಸಲು ಮುಂದಾಗಿದೆ.
'ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ' ಎಂಬ ನಾಮಫಲಕವನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಆದೇಶ ಹೊರಡಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಗಳಿಗೆ ಟಿಪ್ಪಣಿ ಬರೆದಿದ್ದಾರೆ.
ಸಿಟಿಜನ್ ಎನ್ಕ್ವೈರಿ ಕೌನ್ಸಿಲ್ ಆ್ಯಂಡ್ ಸಿಇಸಿ ಟ್ರಸ್ಟ್ ಕಳೆದ ತಿಂಗಳು ಪತ್ರ ಬರೆದು ಸಂಸ್ಥೆ ಭ್ರಷ್ಟಾಚಾರ ನಿರ್ಮೂಲನೆ ಅಭಿಯಾನವನ್ನು ಅಕ್ಟೋಬರ್ 2ರಿಂದ 20ರ ತನಕ ಹಮ್ಮಿಕೊಂಡಿದೆ. ಇದಕ್ಕಾಗಿ "ನನಗೆ ಯಾರು ಲಂಚ ಕೊಡಬೇಕಾಗಿಲ್ಲ. ನಾನು ಭ್ರಷ್ಟ ಅಧಿಕಾರಿಯಾಗಲಾರೆ" ಎಂಬ ಶೀರ್ಷಿಕೆಯ ನಾಮಫಲಕವನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಅಳವಡಿಸಲು ಆದೇಶ ಮತ್ತು ಸುತ್ತೋಲೆಯನ್ನು ಹೊರಡಿಸುವಂತೆ ಮನವಿ ಮಾಡಿದ್ದರು.
ಈ ಮನವಿ ಸಂಬಂಧ ಮುಂದಿನ ಅಗತ್ಯ ಕ್ರಮಕ್ಕಾಗಿ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿ ಕೊಟ್ಟಿದ್ದಾರೆ.
ಇದನ್ನೂ ಓದಿ : ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದ ಕಾಂಗ್ರೆಸ್ನ 'ಪೇ ಸಿಎಂ' ಅಭಿಯಾನ