ಬೆಂಗಳೂರು: ಸರ್ಕಾರ ರಚನೆಯಾಗಿ ಸಚಿವ ಸ್ಥಾನಕ್ಕಾಗಿ 25 ದಿನ ಕಾದಿದ್ದ ನೂತನ ಸಚಿವರಿಗೆ ಸದ್ಯಕ್ಕೆ ಸರ್ಕಾರಿ ನಿವಾಸದ ಭಾಗ್ಯವಿಲ್ಲ. ಅವರು ಕನಿಷ್ಠ ಇನ್ನೊಂದು ತಿಂಗಳು ನಿವಾಸಕ್ಕಾಗಿ ಕಾಯಬೇಕಾದ ಸ್ಥಿತಿ ಬಂದಿದ್ದು, ಅಲ್ಲದೇ ಅಧಿಕಾರಕ್ಕೆ ಬಂದರೂ ಲಕ್ಕಿ ಮನೆ ಭಾಗ್ಯ ಸ್ವತಃ ಮುಖ್ಯಮಂತ್ರಿಗೂ ಸಿಗದಂತಾಗಿದೆ.
ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದವರಿಗೆ ಮಂಜೂರಾಗಿದ್ದ ಸರ್ಕಾರಿ ಬಂಗಲೆಯನ್ನು ಮಾಜಿಗಳಾದರೂ ಯಾರೂ ಖಾಲಿ ಮಾಡಿಲ್ಲ. ಕನಿಷ್ಠ ಎರಡು ತಿಂಗಳು ಬಂಗಲೆಯಲ್ಲಿ ಮುಂದುವರೆಯಲು ಅವಕಾಶ ಇರುವ ಕಾರಣ ಯಾರೂ ಬಂಗಲೆ ಖಾಲಿ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಯಡಿಯೂರಪ್ಪ ಸರ್ಕಾರದಲ್ಲಿನ 17 ಸಚಿವರಿಗೆ ಸದ್ಯಕ್ಕೆ ಸರ್ಕಾರಿ ಬಂಗಲೆ ಭಾಗ್ಯ ಇಲ್ಲದಂತಾಗಿದೆ.
ರೇಸ್ ಕೋರ್ಸ್ ರಸ್ತೆ, ಸವೆನ್ ಮಿನಿಸ್ಟರ್ ಕ್ವಾರ್ಟರ್ಸ್, ಕುಮಾರಕೃಪಾ ಈಸ್ಟ್, ಕ್ರೆಸೆಂಟ್‌ರಸ್ತೆ, ಜಯಮಹಲ್ ನಲ್ಲಿ ಲೋಕೋಪಯೋಗಿ ಇಲಾಖೆಯ ಸರ್ಕಾರಿ ನಿವಾಸಗಳನ್ನು ಸಚಿವರಿಗೆ ಹಂಚಿಕೆ ಮಾಡಲಾಗುತ್ತದೆ. ಆದರೆ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದವರಿಗೆ ಹಂಚಿಕೆಯಾಗಿದ್ದ ಬಂಗಲೆಗಳು ಇನ್ನೂ ತೆರವಾಗಿಲ್ಲ. ಸಾ.ರಾ. ಮಹೇಶ್, ಕೃಷ್ಣ ಬೈರೇಗೌಡ, ಹೆಚ್.ಡಿ ರೇವಣ್ಣ, ಜಾರ್ಜ್, ಸಿದ್ದರಾಮಯ್ಯ ವಾಸ್ತವ್ಯ ಸೇರಿದಂತೆ ಯಾರೂ ಸರ್ಕಾರಿ ನಿವಾಸ ಖಾಲಿ ಮಾಡುವ ಗೋಜಿಗೆ ಹೋಗಿಲ್ಲ.
ಈ ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ವೇಳೆ ಇದ್ದ ಸರ್ಕಾರಿ ಬಂಗಲೆಯಲ್ಲಿ ಇದೀಗ ಸಿದ್ದರಾಮಯ್ಯ ಇದ್ದಾರೆ. ಕೆ.ಜೆ. ಜಾರ್ಜ್ ಗೆ ಮಂಜೂರಾಗಿದ್ದ ನಿವಾಸದಲ್ಲಿ ಜಾರ್ಜ್ ಹೆಸರಿನಲ್ಲೇ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದು, ಸದ್ಯಕ್ಕೆ ನಿವಾಸ ಖಾಲಿ ಮಾಡದಿರಲು ನಿರ್ಧರಿಸಿದ್ದಾರೆ. ಅಧಿಕಾರ ಹೋದ ನಂತರ ಎರಡು ತಿಂಗಳ ಕಾಲ ಅದೇ ನಿವಾಸದಲ್ಲಿ ಇರಲು ಅವಕಾಶವಿದೆ. ಇನ್ನು 25 ದಿನ ಮಾತ್ರ ಆಗಿದೆ, ಇನ್ನೂ ಒಂದು ತಿಂಗಳು ಕಾಲ ಸಮಯಇದೆ, ಮುಂದೆ ನೋಡೋಣ ಎನ್ನುವ ಹೇಳಿಕೆ ನೀಡಿರುವುದು ಬೇಗ ನಿವಾಸ ತೆರವು ಮಾಡಲ್ಲ ಎನ್ನುವ ಸುಳಿವು ನೀಡಿದ್ದಾರೆ.
ಅದರಲ್ಲಿಯೂ ಸಚಿವ ಸ್ಥಾನ ಕಳೆದುಕೊಂಡು ಎಂಟು ತಿಂಗಳು ಕಳೆದರೂ ರಮೇಶ್ ಜಾರಕಿಹೊಳಿ ಇನ್ನು ನಿವಾಸ ತೆರವು ಮಾಡಿಲ್ಲ. ಅವರು ಸವೆನ್ ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿ ವಾಸ್ತವ್ಯ ಮುಂದುವರೆಸಿದ್ದಾರೆ. ಶಾಸಕ ಸ್ಥಾನ ಕಳೆದುಕೊಂಡರೂ ಸರ್ಕಾರಿ ಬಂಗಲೆ ಕಳೆದುಕೊಳ್ಳಲು ಸಿದ್ಧರಿಲ್ಲದೇ ಅಲ್ಲೇ ವಾಸ್ತವ್ಯ ಮುಂದುವರೆಸಿದ್ದಾರೆ.
ಇನ್ನು ಸಚಿವರಿಗೆ ಸರ್ಕಾರಿ ಬಂಗಲೆ ಸಿಗುವುದು ಇರಲಿ ಸ್ವತಃ ಮುಖ್ಯಮಂತ್ರಿಗೇ ಈಗ ಸರ್ಕಾರಿ ಬಂಗಲೆ ಇಲ್ಲದಂತಾಗಿದೆ. ಬಿಎಸ್ವೈ ಲಕ್ಕಿ ಹೌಸ್ ಎಂದೇ ಕರೆಸಿಕೊಳ್ಳುವ ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ಬಂಗಲೆ ತೆರವಿಗೆ ಮಾಜಿ ಸಚಿವ ಸಾ.ರಾ ಮಹೇಶ್ ನಿರಾಕರಿಸಿದ್ದಾರೆ. ಈಗಂತೂ ನಿವಾಸ ಖಾಲಿ ಮಾಡಲ್ಲ. ಇನ್ನಷ್ಟು ದಿನ ಇಲ್ಲೇ ಇರುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.