ಬೆಂಗಳೂರು: ಬಿಬಿಎಂಪಿ ಆರೋಗ್ಯ ಇಲಾಖೆಯ ಕಾರ್ಯ ನಿರ್ವಹಣೆ ಕುರಿತು ಆಡಳಿತಾಧಿಕಾರಿ ಸಭೆ ನಡೆಸಿದರು. ಪಾಲಿಕೆ ಆಸ್ಪತ್ರೆಗಳಿಗೆ ವಿವಿಧ ರೋಗಗಳಲ್ಲಿ ಪರಿಣತಿ ಪಡೆದಿರುವ ತಜ್ಞರನ್ನು ಗೌರವ ಧನದಲ್ಲಿ ಪಡೆಯುತ್ತಿದ್ದು, ಇನ್ನೂ ಹೆಚ್ಚಿನ ತಜ್ಞರನ್ನು ನೇಮಿಸಿಕೊಳ್ಳಲು ತಿಳಿಸಿದರು.
ಅಲ್ಲದೇ ವಿವಿಧ ಯೋಜನೆ ಸಮರ್ಪಕವಾಗಿ ಜಾರಿಗೆ ತರಲು ಪ್ರೋಗ್ರಾಂ ಆಫೀಸರ್ ನೇಮಕಕ್ಕೆ ತಿಳಿಸಿದರು. ಪಾಲಿಕೆ ವ್ಯಾಪ್ತಿಗೆ ಒಳಪಡುವ ರೆಫರಲ್ ಆಸ್ಪತ್ರೆಗಳಿಗೆ ಎಕ್ಸರೇ ಯಂತ್ರಗಳ ಅವಶ್ಯಕತೆ ಇದ್ದು, ಹಾಲಿ ಹೊಸದಾಗಿ ಸರಬರಾಜಾಗಿರುವ ಯಂತ್ರಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸಲು ಕ್ರಮ ವಹಿಸಬೇಕು ಎಂದರು. ನಗರದಲ್ಲಿ ಸೊಳ್ಳೆ ನಿಯಂತ್ರಣ ವ್ಯವಸ್ಥೆಗೆ ಎಲ್ಲಾ ಕಡೆ ಫಾಗಿಂಗ್ ಮತ್ತು ಸೋಂಕು ನಿವಾರಕ ಸಿಂಪಡಣೆ ಮಾಡಲು ಸೂಚಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ವೈದ್ಯಾಧಿಕಾರಿಗಳ ಕೆಲಸದ ಬಗ್ಗೆ ಮಾಹಿತಿ ಪಡೆದರು. ಅದಕ್ಕೆ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಪ್ರತಿಕ್ರಿಯಿಸಿ, ಉದ್ದಿಮೆ ಪರವಾನಗಿ ನೀಡುವುದು, ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆ, ನ್ಯಾಷನಲ್ ಹೆಲ್ತ್ ಸ್ಕೀಮ್ಗಳನ್ನು ಸ್ಥಳೀಯ ಮಟ್ಟದಲ್ಲಿ ಕಾರ್ಯಗತಗೊಳಿಸುವುದು, ಪ್ಲಾಸ್ಟಿಕ್ ಮಾರಾಟ ಮಳಿಗೆಗಳು ಹಾಗೂ ತಂಬಾಕು ಮಾರಾಟ ಮಾಡುವ ಮಳಿಗೆಗಳ ಮೇಲೆ ದಾಳಿ ನಡೆಸಿ ನಿಯಂತ್ರಣಕ್ಕೆ ತರುವುದು, ಮೇಯರ್ ಹಾಗೂ ಪಾಲಿಕೆ ಸದಸ್ಯರ ವೈದ್ಯಕೀಯ ಅನುದಾನ ನೀಡುವುದು, ಫಾಗಿಂಗ್ ಹಾಗೂ ಸೋಂಕು ನಿವಾರಕ ಸಿಂಪಡಣೆ ಮಾಡುವ ಕೆಲಸ ನಡೆಯುತ್ತಿದ್ದು, ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದರು.