ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಪ್ರಭಾವದಿಂದಾಗಿ ಜಸ್ಟ್ ಒಂದೇ ವಾರದಲ್ಲಿ ವಾತಾವರಣವೇ ಬದಲಾಗಿ ಹೋಯಿತು. ಕಳೆದ ಆರು ತಿಂಗಳಿನಿಂದ ನಿಯಂತ್ರಣದಲ್ಲಿದ್ದ ಸೋಂಕು, ಹೊಸ ರೂಪಾಂತರಿಯ ವೇಗಕ್ಕೆ ತಲೆಕೆಳಗಾಗಿ ಮಾಡಿದೆ.
ಇನ್ನೇನು ಕೊರೊನಾದಿಂದ ಗೆದ್ದೆವು ಅಂತಾ ಅಂದುಕೊಳ್ಳುವಾಗಲೇ ದಿಢೀರ್ ಅಪ್ಪಳಿಸಿರುವ ಸೋಂಕನ್ನ ಕಟ್ಟಿ ಹಾಕಲು ಸರ್ಕಾರ ಮೊದಲ ಹಂತವಾಗಿ ನೈಟ್ ಕರ್ಫ್ಯೂ ಜಾರಿ ಮಾಡಿತ್ತು. ಯಾವಾಗ ಪರಿಸ್ಥಿತಿ ಕೈಮೀರಿ ಹೋಯ್ತೋ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ.
ಇಂದು ರಾಜ್ಯಾದ್ಯಂತ ಜಾರಿಯಾಗಿರುವ ವಾರಾಂತ್ಯ ಕರ್ಫ್ಯೂಗೆ ಜನರಿಂದ ಉತ್ತಮ ಸಹಕಾರ ಸಿಕ್ಕಿದೆ. ಮೊದಲ ದಿನ ಯಶಸ್ವಿಯಾಗಿದೆ. ವೀಕೆಂಡ್ ಬಂದರೆ ಜನರಿಂದ ಗಿಜಿಗುಡುವ ರಸ್ತೆಗಳು, ಮಾರ್ಕೆಟ್‌ಗಳು ಇಂದು ಸಂಪೂರ್ಣ ಸ್ತಬ್ಧವಾಗಿದ್ದವು.
ಅಗತ್ಯ ಸೇವೆಗೆ ಒಳಪಡುವ ವಾಹನಗಳಿಗೆ ಮಾತ್ರ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಈ ಸಲದ ಕರ್ಫ್ಯೂ ಸಮಯದಲ್ಲಿ ಮೆಟ್ರೋ, ಕೆಎಸ್ಆರ್ಟಿಸಿ ಬಸ್, ಆಟೋ, ಓಲಾ& ಉಬರ್ ಸಂಚಾರಕ್ಕೆ ಅವಕಾಶ ನೀಡಿದ್ದರು ಸಹ ಪ್ರಯಾಣಿಕರು ಇಲ್ಲದೇ ಖಾಲಿ ಖಾಲಿಯಾಗಿದ್ದ ದೃಶ್ಯ ಕಂಡು ಬಂತು.
ಉದ್ಯಾನವನ ಬಂದ್- ರಸ್ತೆ, ರೈಲ್ವೆ ಹಳಿಗಳ ಮೇಲೆ ವಾಕ್ : ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ಶುರುವಾಗಿ ಸೋಮವಾರ 5 ಗಂಟೆಯವರೆಗೆ ಈ ವೀಕೆಂಡ್ ಕರ್ಪ್ಯೂ ಮುಂದುವರಿಯಲಿದೆ. ಹೀಗಾಗಿ, ನಗರದ ಪಾರ್ಕ್‌ಗಳೂ ಬಂದ್ ಆಗಿರುವ ಕಾರಣ ಜನ ರಸ್ತೆ, ರೈಲ್ವೆ ಹಳಿಗಳಲ್ಲಿ ವಾಕ್ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
ಬೀದಿ ಬದಿ ವ್ಯಾಪಾರಕ್ಕೆ ಅವಕಾಶ : ಕೆಆರ್ ಮಾರುಕಟ್ಟೆ ಸುತ್ತಮುತ್ತ ನಿಷೇಧ : ಬೀದಿಬದಿ ವ್ಯಾಪಾರಿಗಳಿಗೆ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಅಷ್ಟೇ ಅಲ್ಲ, ರಾಜಧಾನಿಗೆ ಹೆಚ್ಚು ಹೊರಗಿನವರೇ ಉದ್ಯೋಗ ಅರಸಿ ಬರುವ ಕಾರಣಕ್ಕೆ ತಿಂಡಿ-ತಿನಿಸಿಗೆ ಹೋಟೆಲ್‌ನಲ್ಲಿ ಪಾರ್ಸಲ್ಗೆ ಅವಕಾಶ ನೀಡಲಾಗಿತ್ತು.
ಇತ್ತ ನಗರದ ಹಾರ್ಟ್ ಆಫ್ ದಿ ಸಿಟಿಯ ಅತಿದೊಡ್ಡ ಮಾರ್ಕೆಟ್ ಕೆ.ಆರ್ ಮಾರ್ಕೆಟ್‌ನಲ್ಲಿ ವ್ಯಾಪಾರಸ್ಥರ, ಗ್ರಾಹಕರ ಜನದಟ್ಟಣೆ ಇಲ್ಲದೆ ಖಾಲಿ ಖಾಲಿಯಾಗಿದ್ದವು. ಜನಜಂಗುಳಿ ತಪ್ಪಿಸುವ ನಿಟ್ಟಿನಲ್ಲಿ ಕೆ.ಆರ್ ಮಾರ್ಕೆಟ್ ಸುತ್ತಮುತ್ತ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಇತ್ತ ಮಾರ್ಕೆಟ್‌ನಲ್ಲಿ ಮಾರ್ಷಲ್ಸ್ ಮತ್ತು ಪೊಲೀಸರ ನಿಯೋಜನೆ ಮಾಡಿ ಜನರನ್ನು ನಿಯಂತ್ರಿಸಲಾಗಿತ್ತು. ಜೊತೆಗೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಕೆಲಸಗಳು ನಡೆದವು.
ಬಿಎಂಟಿಸಿ ಬಂದ್-ಆಟೋಗಳಿಗೆ ಹೆಚ್ಚಿದ ಬೇಡಿಕೆ : ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಸ್ತೆಗಿಳಿಯುತ್ತಿದ್ದ ಬಿಎಂಟಿಸಿ ಬಸ್ ಕರ್ಫ್ಯೂ ಕಾರಣಕ್ಕೆ ಸಾರ್ವಜನಿಕ ಸೇವೆಗೆ ತಾತ್ಕಾಲಿಕ ನಿಷೇಧ ಹೇರಿತ್ತು. ಕೇವಲ ತುರ್ತು ಅಗತ್ಯಕ್ಕಷ್ಟೇ 500 ಬಸ್‌ಗಳು ರಸ್ತೆಗಿಳಿದಿದ್ದವು. ಇತ್ತ ಬಿಎಂಟಿಸಿ ಇಲ್ಲದ ಕಾರಣಕ್ಕೆ ಆಟೋಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿತ್ತು. ರೈಲ್ವೆ ಓಡಾಟ ಎಂದಿನಂತೆ ಇದ್ದಿದ್ದರಿಂದ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಜಮಾಯಿಸಿದ್ದರು. ಇತ್ತ ಬಿಎಂಟಿಸಿ ಬಸ್ ಇಲ್ಲದಿದ್ದ ಕಾರಣಕ್ಕೆ ಆಟೋ, ಓಲಾ-ಉಬರ್ ಸೇವೆಗೆ ಮುಗಿಬೀಳುತ್ತಿದ್ದರು.
ರಾಜಾಜಿನಗರ ಇಂಡಸ್ಟ್ರಿಯಲ್ ಟೌನ್ನಲ್ಲಿ ಎಂದಿನಂತೆ ಕೆಲಸ ಕಾರ್ಯ : ಇನ್ನು ರಾಜಾಜಿನಗರ, ಪೀಣ್ಯಾ ಭಾಗದ ಇಂಡಸ್ಟ್ರಿಯಲ್ ಟೌನ್ನಲ್ಲಿರುವ ಕಾರ್ಖಾನೆಗಳಿಗೆ ತೆರೆಯಲು ಅವಕಾಶ ಇತ್ತು. ಹೀಗಾಗಿ, ನೌಕರರು ಕೆಲಸಕ್ಕೆ ಬರಲು, ಬಸ್‌ಗೆ ಕಾಯುತ್ತಿದ್ದ ದೃಶ್ಯ ಕಂಡು ಬಂತು. ಎಂದಿನಂತೆ ಕಾರ್ಖಾನೆಗಳು, ಪ್ರಿಂಟಿಂಗ್ ಪ್ರೆಸ್ಗಳು ಕಾರ್ಯನಿರ್ವಹಿಸುತ್ತಿದ್ದವು.
ವೀಕೆಂಡ್‌ನಲ್ಲಿ ಶಾಲಾ-ಕಾಲೇಜು ಬಂದ್ : ಕೊರೊನಾ ಕಾರಣಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ 1-9 ಹಾಗೂ ಕೋಚಿಂಗ್ ಸೆಂಟರ್, ಪದವಿ, ಸ್ನಾತಕೋತ್ತರ ಪದವಿ ತರಗತಿಗಳ ಭೌತಿಕ ಪಾಠಕ್ಕೆ ಬ್ರೇಕ್ ಹಾಕಲಾಗಿದೆ. ಕೇವಲ 10,11,12ನೇ ತರಗತಿಗೆ ಅಷ್ಟೇ ಸೋಮವಾರದಿಂದ ಶುಕ್ರವಾರದವರೆಗೆ ಅವಕಾಶ ನೀಡಲಾಗಿತ್ತು. ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ ಕಾರಣಕ್ಕೆ ಶನಿವಾರ ಯಾವುದೇ ಶಾಲಾ-ಕಾಲೇಜು ಆರಂಭಕ್ಕೆ ಅವಕಾಶ ಇರಲಿಲ್ಲ.
ಪೊಲೀಸ್ ಭದ್ರತೆ : ಎರಡನೇ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್ ವಿಧಿಸಿದ್ದಾಗ ರೋಡಿಗಿಳಿದಾಗ ಪೊಲೀಸ್ ಸಿಬ್ಬಂದಿ ಲಾಠಿ ರುಚಿ ತೋರಿಸಿದ್ದರು. ಹೀಗಾಗಿ, ಈ ಸಲ ಜನರು ಎಚ್ಚೆತ್ತುಕೊಂಡು ಸುಖಾಸುಮ್ನೆ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಮುಖ್ಯ ರಸ್ತೆಯಲ್ಲೇ ಬ್ಯಾರಿಕೇಡ್ ಹಾಕಿ, ಸೂಕ್ತ ಐಡಿ ಕಾರ್ಡ್ ತೋರಿಸಿದವರಿಗೆ ಅಷ್ಟೇ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇತ್ತ ಬೇಕಾಬಿಟ್ಟಿಯಾಗಿ ಬೈಕ್ ಹಿಡಿದು ಓಡಾಡಿದವರಿಗೆ ದಂಡ ಹಾಕಿ ಗಾಡಿಗಳನ್ನ ಸೀಜ್ ಮಾಡಲಾಯಿತು.
ಫೀಲ್ಡಿಗಿಳಿದ ಹೋಂ ಮಿನಿಸ್ಟರ್ : ನಗರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ರೋಡಿಗಳಿದು ಪರಿಶೀಲಿಸಿದರು. ದಿನಸಿ ಖರೀದಿಸಲು ರೋಡಿಗಿಳಿದ ಯುವಕನಿಗೆ ಸಚಿವರು ವಾರ್ನಿಂಗ್ ಕೊಟ್ಟು, ಕರ್ಫ್ಯೂ ಸಮಯದಲ್ಲಿ ಹೀಗೆ ಓಡಾಡದಂತೆ ತಿಳಿಸಿದರು. ಇವರಿಗೆ ಪೊಲೀಸ್ ಕಮಿಷನರ್ ಕಮಲ್ ಪಂತ್ ಕೂಡ ಸಾಥ್ ನೀಡಿದರು. ಮೊದಲ ದಿನಕ್ಕೆ ಸಾರ್ವಜನಿಕರಿಂದ ಉತ್ತಮ ಸಹಕಾರ ಸಿಕ್ಕಿದೆ. ನಾಳೆಯು ಯಾವ ರೀತಿಯಲ್ಲಿ ಕರ್ಫ್ಯೂ ಇರಲಿದೆ ಎಂಬುದನ್ನ ಕಾದು ನೋಡಬೇಕಿದೆ.