ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಸಿಗದೇ ಪರದಾಡುತ್ತಿರುವವರಿಗೆ ಸದ್ಯದಲ್ಲೇ ಸಿಹಿ ಸುದ್ದಿ ಕಾದಿದೆ. ನಿವೇಶನಕ್ಕಾಗಿ ಹಣ ಪಾವತಿ ಮಾಡಿರುವವರಿಗೆ ಜ್ಯೇಷ್ಠತೆ ಮತ್ತು ಆದ್ಯತೆ ಆಧಾರದಲ್ಲಿ ಹೊಸ ವರ್ಷಾರಂಭದ ವೇಳೆಗೆ ನಿವೇಶನವನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಡಾವಣೆಯ ಸ್ಥಿತಿಗತಿ ಬಗ್ಗೆ ಮಾಹಿತಿಯನ್ನು ಪಡೆದರು. ಈ ವೇಳೆ ಮಾತನಾಡಿದ ಅವರು, 10-15 ವರ್ಷಗಳ ಹಿಂದೆಯೇ ನಿವೇಶನಕ್ಕಾಗಿ ಹಣ ಪಾವತಿ ಮಾಡಿರುವ ಜನರು ನಿವೇಶನಕ್ಕಾಗಿ ಅಲೆಯುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಕೆಂಪೇಗೌಡ ಸೇರಿದಂತೆ ಮತ್ತಿತರೆ ಬಡಾವಣೆಗಳಲ್ಲಿ ಬದಲಿ ನಿವೇಶನ ನೀಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಯಾವುದೇ ಕಾನೂನು ತೊಡಕು ಇಲ್ಲದಿರುವ ಪ್ರದೇಶವನ್ನು ಅಭಿವೃದ್ಧಿಪಡಿಸಿ, ನಿವೇಶನಗಳನ್ನು ರಚನೆ ಮಾಡಬೇಕು ಎಂದು ಸೂಚಿಸಿದರು.
ನಿವೇಶನಗಳನ್ನು ಅಭಿವೃದ್ಧಿಪಡಿಸಿದ ನಂತರ ಎಷ್ಟು ಜನರಿಗೆ ನಿವೇಶನಗಳನ್ನು ನೀಡಬಹುದು ಮತ್ತು ಯಾವ ಅಳತೆಯ ನಿವೇಶನಗಳನ್ನು ನೀಡಬಹುದು ಎಂಬುದರ ಬಗ್ಗೆ ವಿವರವಾದ ವರದಿಯನ್ನು ಡಿಸೆಂಬರ್ 30ರೊಳಗೆ ಸಿದ್ಧಪಡಿಸುವಂತೆ ನಿರ್ದೇಶನ ನೀಡಿದರು. ಈ ವರದಿ ಆಧಾರದ ಮೇಲೆ ನಿವೇಶನಗಳ ಲಭ್ಯತೆಯನ್ನು ಗಮನಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಹೊಸ ವರ್ಷದ ವೇಳೆಗೆ ಅಥವಾ ಜನವರಿ ಅಂತ್ಯದ ವೇಳೆಗೆ ಅರ್ಕಾವತಿಯಲ್ಲಿ ಲಭ್ಯವಿರುವ ನಿವೇಶನಗಳನ್ನು ನಾಗರಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಅರ್ಕಾವತಿ ಗೊಂದಲದ ಗೂಡಾಗಿದ್ದು, ಇದರಿಂದ ಸಾವಿರಾರು ನಾಗರಿಕರು ನಿವೇಶನಕ್ಕಾಗಿ ಹಣವನ್ನು ಪಾವತಿ ಮಾಡಿದ್ದರೂ ನಿವೇಶನವನ್ನು ಪಡೆಯಲು ಸಾಧ್ಯವಾಗಿಲ್ಲ. ಇದರ ಪರಿಣಾಮ ಬಿಡಿಎಗೆ ಕೆಟ್ಟ ಹೆಸರು ಬರುವಂತಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ಸಮರ್ಪಕವಾಗಿ ಕೆಲಸ ಮಾಡಿ ನೊಂದ ನಾಗರಿಕರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಭೆಯಲ್ಲಿ ಬಿಡಿಎ ಕಾರ್ಯದರ್ಶಿ ವಾಸಂತಿ ಅಮರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.
ಓದಿ...ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ದೋಖಾ : ಸದ್ಯ ಸಿಸಿಬಿ ಖೆಡ್ಡಾಕ್ಕೆ ಬಿದ್ದ ಆಸಾಮಿ