ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತುಮಕೂರು ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದ ಪುಣ್ಯಾತ್ಮರಿಗೆ ಒಳ್ಳೆಯದಾಗಲಿ. ಈ ಸೋಲಿನಿಂದ ಎದೆಗುಂದೆ ಮತ್ತೆ ಪಕ್ಷ ಸಂಘಟಿಸಲು ಸಿದ್ಧನಾಗುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಭರವಸೆಯ ಮಾತುಗಳನ್ನಾಡಿದ್ದಾರೆ.
ಅರಮನೆ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಂಘಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಬೀಳಲು ಯಾರೂ ಹೊಣೆ ಅಲ್ಲ. ಹಾಗಾಗಿ ಯಾರನ್ನೂ ದೂಷಿಸುವುದಿಲ್ಲ. ತಪ್ಪು ನಮ್ಮಲೇ ಇರಬಹುದು. ಚುನಾವಣೆ ಯಾವಾಗ ಬರಲಿದೆ ಎಂಬುದು ನಮ್ಮ ಕೈಯಲ್ಲಿ ಇಲ್ಲ. ಬಿಜೆಪಿ ಸರ್ಕಾರ ಮೂರುವರೆ ವರ್ಷ ಅಧಿಕಾರಿ ಮಾಡಿದರೂ ಚಿಂತೆಯಿಲ್ಲ. ನಾವು ಪಕ್ಷ ಸಂಘಟನೆ ಮಾಡಿ ಹೋರಾಟ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
14 ತಿಂಗಳ ಕಾಲ ಸರ್ಕಾರ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ಅವರು ಧೃತಿಗೆಡದೆ ಸಾಲಮನ್ನಾ ಮಾಡಿದ್ದಾರೆ. ಇದನ್ನು ಜನರ ಮನಸ್ಸಿಗೆ ತಲುಪುವಂತೆ ಮಾಡುವ ಶಕ್ತಿ ಕಾರ್ಯಕರ್ತರಿಗಿದೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಾಡಿದ ಕೆಲಸಗಳನ್ನು ಜನರಿಗೆ ಮುಟ್ಟಿಸಬೇಕಿದೆ ಎಂದು ಹೆಚ್ಡಿಡಿ ಸಲಹೆ ನೀಡಿದ್ರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಯಾವಾಗ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ತಿಳಿದಿಲ್ಲ. ಹಾಗಾಗಿ ಚುನಾವಣೆ ಯಾವಾಗ ಬೇಕಾದರೂ ಎದುರಾಗಬಹುದು. ಅದಕ್ಕೆ ಪಕ್ಷ ಸಿದ್ಧವಾಗಿರಬೇಕು ಎಂದು ದೇವೇಗೌಡ್ರು ಕರೆ ನೀಡಿದ್ರು.
ಮೂರು ಸಮಾವೇಶಗಳನ್ನು ನಡೆಸಲು ತೀರ್ಮಾನ: ಮೂರು ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದ್ದೇನೆ. ಈ ತಿಂಗಳ ಅಂತ್ಯಕ್ಕೆ ಮಹಿಳಾ ಸಮಾವೇಶ ನಡೆಸಿ ಮಹಿಳಾ ಮೀಸಲಾತಿಗೆ ಒತ್ತಾಯಿಸಲಾಗುವುದು. ಮುಂದಿನ ತಿಂಗಳು ಹಿಂದುಳಿದ ವರ್ಗ, ಎಸ್ಸಿ-ಎಸ್ಟಿ ಸಮಾವೇಶವನ್ನು ಉತ್ತರ ಕರ್ನಾಟಕದಲ್ಲಿ ಆಯೋಜಿಸಲಾಗುವುದು. ಪಕ್ಷ ಉಳಿಸಲು ನಿಷ್ಠಾವಂತ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ನಡೆಯಲಿದೆ ಎಂದು ತಿಳಿಸಿದ್ರು.
ಪಕ್ಷದಿಂದ ಯಾರು ಹೋದರು, ಯಾರು ಉಳಿದಿದ್ದಾರೆ ಎನ್ನುವುದನ್ನು ಪ್ರಶ್ನಿಸುವುದಿಲ್ಲ. ಉಪ ಚುನಾವಣೆಯಲ್ಲಿ ಆಯಾ ಕ್ಷೇತ್ರದ ಕಾರ್ಯಕರ್ತರ ಜೊತೆ ಸಮಾಲೋಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ದೊಡ್ಡಗೌಡ್ರು ಹೇಳಿದ್ರು.
ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ, ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ಎಂ.ಸಿ. ಮನಗೂಳಿ ಸೇರಿದಂತೆ ಎಲ್ಲ ಶಾಸಕರು ಉಪಸ್ಥಿತರಿದ್ದರು. ಆದರೆ, ಮಾಜಿ ಸಚಿವ ಜಿ.ಟಿ. ದೇವೇಗೌಡ, ಶ್ರೀನಿವಾಸ್ (ವಾಸು) ಸಮಾವೇಶಕ್ಕೆ ಗೈರು ಹಾಜರಾಗಿದ್ದರು.