ದೊಡ್ಡಬಳ್ಳಾಪುರ : ಲಾಕ್ಡೌನ್ ಜಾರಿಯಿಂದ ಬೀದಿ ಬದಿಯ ವ್ಯಾಪಾರಿಗಳು ಅಕ್ಷರಶಃ ಬೀದಿಗೆ ಬಿದ್ದರು. ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಸ್ವನಿಧಿ ಯೋಜನೆ ಜಾರಿ ಮಾಡಿದೆ. ಕೇಂದ್ರ ಸರ್ಕಾರದ ಸ್ವನಿಧಿ ಯೋಜನೆ ಅನುಷ್ಠಾನದಲ್ಲಿ ದೇಶದ 10 ಟಾಪ್ ಪಟ್ಟಣಗಳ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ನಗರಸಭೆ ಬರುವ ಸಾಧ್ಯತೆ ಇದೆ.
ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿ ಮಾಡಿದ ಲಾಕ್ಡೌನ್ನಿಂದ ಬೀದಿ ಬದಿಯ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುವಂತಾಯ್ತು. ಕಷ್ಟದ ಸಮಯದಲ್ಲಿ ಜೀವನ ಸಾಗಿಸಲು ಬೀದಿ ಬದಿ ವ್ಯಾಪಾರಿಗಳು ಮೀಟರ್ ಬಡ್ಡಿ ದಂಧೆಗೆ ಬಲಿಯಾಗುತ್ತಾರೆ.
ಇದನ್ನು ತಡೆಯುವ ಕಾರಣಕ್ಕೆ ಕೇಂದ್ರ ಸರ್ಕಾರ ಆತ್ಮ ನಿರ್ಭರ ಯೋಜನಯಡಿ ಪಿಎಂ ಸ್ವನಿಧಿ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಫಲಾನುಭವಿಗಳಾಗುವ ಬೀದಿ ಬದಿಯ ವ್ಯಾಪಾರಿಗಳಿಗೆ ಬ್ಯಾಂಕ್ನಿಂದ 20 ಸಾವಿರ ರೂ. ಸಾಲ ನೀಡಲಾಗುತ್ತದೆ. ಸುಲಭ ಕಂತುಗಳಲ್ಲಿ ಸಾಲವನ್ನು ಮರುಪಾವತಿ ಮಾಡಬಹುದು.
ಶೇ. 86 ರಷ್ಟು ಪ್ರಗತಿ
ಪಿಎಂ ಸ್ವನಿಧಿ ಯೋಜನೆ ಅನುಷ್ಠಾನದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಉತ್ತಮ ಸಾಧನೆ ಮಾಡಿದೆ. 1,524 ಫಲಾನುಭವಿಗಳ ಅನ್ಲೈನ್ ಅರ್ಜಿಗಳನ್ನು ಸಲ್ಲಿಸಿ ಶೇ.164ರಷ್ಟು ಪ್ರಗತಿ ಸಾಧಿಸಲಾಗಿದೆ. ಸಾಲ ಮಂಜೂರಾತಿಯಲ್ಲಿ 841 ಫಲಾನುಭವಿಗಳಿಗೆ ಅವಕಾಶ ಕಲ್ಪಿಸಿ ಶೇ.90ರಷ್ಟು ಮತ್ತು ಸಾಲ ವಿತರಣೆಯಲ್ಲಿ 799 ಫಲಾನುಭವಿಗಳಿಗೆ ಅವಕಾಶ ಕಲ್ಪಿಸಿ ಶೇ.86 ರಷ್ಟು ಪ್ರಗತಿ ಸಾಧಿಸಿದೆ.
3,107 ಫಲಾನುಭವಿಗಳಿಗೂ ಸಾಲ ಸೌಲಭ್ಯಕ್ಕೆ ಪ್ರಯತ್ನ
ದೇಶದ ಟಾಪ್ 10 ಪಟ್ಟಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ದೊಡ್ಡಬಳ್ಳಾಪುರ ನಗರಸಭೆ 3,107 ಫಲಾನುಭವಿಗಳಿಗೂ ಹೆಚ್ಚು ಬ್ಯಾಂಕ್ ಸಾಲ ವಿತರಿಸಬೇಕಿದೆ. ದೊಡ್ಡಬಳ್ಳಾಪುರ ನಗರಸಭೆ ಭೌತಿಕವಾಗಿ 1,524 ಫಲಾನುಭವಿಗಳಿಗೆ ಮಾತ್ರ ಸಾಲ ಸೌಲಭ್ಯ ಕಲ್ಪಿಸಲು ಆನ್‌ಲೈನ್ ಅರ್ಜಿ ಸಲ್ಲಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಲು ಪ್ರಯತ್ನಿಸುತ್ತಿದೆ.
ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಸೌಲಭ್ಯಕ್ಕಿಂತ ಹಣಕಾಸಿನ ನೆರವು ನೀಡಬೇಕು. ಕೋವಿಡ್ ಸಮಯದಲ್ಲಿ ಆದಾಯವೇ ಇಲ್ಲದಿರುವ ಸಮಯದಲ್ಲಿ ಸಾಲವನ್ನ ಹೇಗೆ ಮರುಪಾವತಿ ಮಾಡಲು ಸಾಧ್ಯ ಎಂದು ದೊಡ್ಡಬಳ್ಳಾಪುರ ಬೀದಿ ಬದಿಯ ವ್ಯಾಪಾರಿ ಸಂಘದ ಬಾಬಜಾನ್ ಪಿಎಂ ಸ್ವನಿಧಿ ಯೋಜನೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.