ಬೆಂಗಳೂರು: ಬೈಕ್‌ನಲ್ಲಿ ತೆರಳಿ ಬೀಗ ಹಾಕಿದ ಮನೆಗಳನ್ನೇ ಗುರುತಿಸಿ ಕಾರಿನಲ್ಲಿ ತೆರಳಿ ಕಿಟಕಿ ಮುರಿದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಅತ್ತೆ-ಅಳಿಯ ಸೇರಿ ಐವರನ್ನು ಸೋಲದೇವನಹಳ್ಳಿ ಪೊಲೀಸರು ಸೆರೆಹಿಡಿದಿದ್ದಾರೆ. ವೆಂಕಟೇಶ್, ರಘು, ಅರ್ಜುನ್, ಗಣೇಶ್ ಹಾಗೂ ಮಹದೇವಮ್ಮ ಅವರಿಂದ 61 ಲಕ್ಷ ಮೌಲ್ಯದ 829 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.
ವೆಂಕಟೇಶ್ ಹಾಗೂ ಮಹದೇವಮ್ಮ ಅಳಿಯ- ಅತ್ತೆಯಾಗಿದ್ದಾರೆ. ತುಮಕೂರು ಮೂಲದ ವೆಂಕಟೇಶ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ವಿಲಾಸಿ ಜೀವನ ಹಾಗೂ ದುಶ್ವಟ ತೀರಿಸಿಕೊಳ್ಳಲು ಕಳ್ಳತನ ಮಾಡಲು ಯೋಜನೆ ರೂಪಿಸಿದ್ದ. ಇದಕ್ಕಾಗಿ ಸಹಚರರನ್ನು ಒಗ್ಗೂಡಿಸಿಕೊಂಡಿದ್ದ. ಸಹಚರರೆಲ್ಲರೂ ಹಗಲಿನಲ್ಲಿ ಬೈಕ್‌ನಲ್ಲಿ ತೆರಳಿ ಬೀಗದ ಹಾಕಿದ ಮನೆಗಳನ್ನೇ ಗುರುತು ಮಾಡಿ ಯೋಜನೆ ರೂಪಿಸುತ್ತಿದ್ದರು. ರಾತ್ರಿ ವೇಳೆ ಕಾರಿನಲ್ಲಿ ತೆರಳಿ ಮನೆ ಕಿಟಕಿಯ ಸರಳುಗಳನ್ನ ಹೈಡ್ರೋಲಿಕ್ ಯಂತ್ರದಿಂದ ಮುರಿದು ಒಳನುಗ್ಗಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು.

ಕದ್ದ ಚಿನ್ನಾಭರಣವನ್ನು ಅತ್ತೆ ಮಹದೇವಮ್ಮ ಅವರಿಂದ ವಿಲೇವಾರಿ ಮಾಡಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಬಂಧಿತ ಆರೋಪಿಗಳ ವಿರುದ್ಧ ಸೋಲದೇವನಹಳ್ಳಿ, ರಾಜಾನುಕುಂಟೆ, ಯಲಹಂಕ ನ್ಯೂ ಟೌನ್, ಕೆಆರ್ ಪುರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 12 ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಮಾವನ ಮನೆಗೆ ಬಂದಿದ್ದ ಅಳಿಯನಿಂದ ಮಗಳ ಮೇಲೆ ಹಲ್ಲೆ: ಪತ್ನಿ, ಕಂದಮ್ಮನಿಗೆ ಚಾಕು ಇರಿತ