ಬೆಂಗಳೂರು: ಕಳೆದ 13 ವರ್ಷಗಳಿಂದ ರಾಮಚಂದ್ರಾಪುರ ಮಠದ ಆಡಳಿತದಲ್ಲಿದ್ದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಇದೀಗ ಸುಪ್ರೀಂಕೋರ್ಟ್ ಆದೇಶದಂತೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ಹಸ್ತಾಂತರಗೊಂಡಿದೆ. ಈ ಮೂಲಕ ರಾಮಚಂದ್ರಾಪುರ ಮಠ ದೇವಸ್ಥಾನದ ಮೇಲಿನ ಹಿಡಿತವನ್ನು ಕಳೆದುಕೊಂಡಿದೆ.
ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ ಎಂಬ ದೃಷ್ಟಿಯಿಂದ 2008ರಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ದೇವಸ್ಥಾನದ ಮೂಲ ಟ್ರಸ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಒಂದಿಡೀ ದಶಕ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ 2018ರ ಸೆಪ್ಟೆಂಬರ್ ನಲ್ಲಿ ದೇವಸ್ಥಾನದ ನಿರ್ವಹಣೆಗೆ ಸಮಿತಿ ರಚಿಸಿ, ಅವರ ಸುಪರ್ದಿಗೆ ನೀಡುವಂತೆ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಮಠ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು, ಇದೀಗ ಸುಪ್ರೀಂಕೋರ್ಟ್ ಕೂಡ ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವುದಲ್ಲದೇ, ನಿವೃತ್ತ ನ್ಯಾಯಮೂರ್ತಿ ಬಿ.ಎನ್ ಶ್ರೀಕೃಷ್ಣ ಅವರ ನೇತೃತ್ವದ ಸಮಿತಿಗೆ ದೇವಾಲಯ ಹಸ್ತಾಂತರಿಸುವಂತೆ ಆದೇಶಿಸಿದೆ.
ದೇವಸ್ಥಾನದ ಹಿನ್ನೆಲೆ:
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಸ್ಥಾನದ ನಿರ್ಮಾಣದ ಹಿಂದೆ ಪುರಾಣ ಕಥೆಗಳಿವೆ. ಮುಖ್ಯವಾಗಿ ಶಿವಭಕ್ತನಾಗಿದ್ದ ರಾವಣ ತಂದಿದ್ದ ಆತ್ಮಲಿಂಗದ ಚೂರು ಬಿದ್ದ ಜಾಗದಲ್ಲಿ ಮಹಾಬಲೇಶ್ವರ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎನ್ನಲಾಗುತ್ತದೆ. ಸ್ಕಂದ ಪುರಾಣದಲ್ಲಿ ಕ್ಷೇತ್ರ ಮಹಿಮೆಯ ಕೀರ್ತನೆ ಇವೆ. ಹೀಗೆ ಪೌರಾಣಿಕ ಹಿನ್ನೆಲೆಯುಳ್ಳ ದೇವಸ್ಥಾನವನ್ನು ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿದೆ.
ವಾರಾಣಸಿ ಅಥವಾ ಕಾಶಿಗೆ ಹೋಗಲಾರದವರು ಇಲ್ಲಿಗೆ ಬಂದು ಅಪರ ಕರ್ಮಗಳನ್ನು ಪೂರೈಸಿದರೆ ಮೃತರ ಆತ್ಮಕ್ಕೆ ಮುಕ್ತಿ - ಶಾಂತಿ ಸಿಗುತ್ತದೆಂಬ ಬಲವಾದ ನಂಬಿಕೆ ಇದೆ. ಹೀಗಾಗಿಯೇ ಇಲ್ಲಿಗೆ ವರ್ಷಪೂರ್ತಿ ಭಕ್ತರ ದಂಡು ಹರಿದುಬರುತ್ತಿದ್ದು, ದೇವಸ್ಥಾನದ ಆದಾಯವೂ ದೊಡ್ಡಮಟ್ಟದಲ್ಲಿದೆ. ಇಂತಹ ದೇವಸ್ಥಾನವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆಧಾರದಲ್ಲಿ ಸರ್ಕಾರ ಮಠಕ್ಕೆ ಹಸ್ತಾಂತರಿಸಿತ್ತು.
ದೇವಸ್ಥಾನ ಟ್ರಸ್ಟಿಗಳಿಗೆ ಸೇರಿದ್ದು:
ದೇವಸ್ಥಾನಕ್ಕೆ ಮೊದಲಿನಿಂದಲೂ ಟ್ರಸ್ಟಿಗಳಿದ್ದು, ಅವರೇ ನಿರ್ವಹಣೆ ಮಾಡುತ್ತಿದ್ದ ಬಗ್ಗೆ 1883ರಲ್ಲಿ ಪ್ರಕಟಗೊಂಡ ಗೆಜೆಟಿಯರ್ ಆಫ್ ದಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಹೇಳಲಾಗಿದೆ, ಜತೆಗೆ ದೇವಸ್ಥಾನದ ಪೂಜಾ ವಿಧಿ-ವಿಧಾನ ಹಾಗೂ ಆಯ-ವ್ಯಯಗಳ ಮಾಹಿತಿ ಇದ್ದು, ಟ್ರಸ್ಟಿಗಳನ್ನು ಅಂದಿನ ಸರ್ಕಾರದ ಆ್ಯಕ್ಟ್ 20ರ ಅಡಿ ನೇಮಿಸಲಾಗಿದೆ ಎಂದು ಮಾಹಿತಿ ಇದೆ. ಆದರೆ, ರಾಮಚಂದ್ರಾಪುರ ಮಠಕ್ಕೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿರಲಿಲ್ಲ. ಇದಕ್ಕೆ ಪೂರಕವೆಂಬಂತೆ ಮಠ 2005ರಲ್ಲಿ ತನಗೆ ಸೇರಿರುವ 10 ದೇವಸ್ಥಾನಗಳನ್ನು ಡಿನೋಟಿಫೈ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಹೆಸರಿರಲಿಲ್ಲ ಎಂಬುದು ಗಮನಾರ್ಹ.
ಬ್ರಿಟಿಷ್ ಅವಧಿಯಲ್ಲಿ ಮಾಡಿದ್ದ ಆ್ಯಕ್ಟ್ 20ನ್ನು ರಾಜ್ಯ ಹೈಕೋರ್ಟ್ 1997ರಲ್ಲಿ ಸಂವಿಧಾನಬಾಹಿರ ಎಂದು ಘೋಷಿಸಿತ್ತು. ಆ ಬಳಿಕ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಧರ್ಮಾದಾಯ ದತ್ತಿ ಕಾಯ್ದೆಯನ್ನು 2003ರಲ್ಲಿ ಜಾರಿ ಮಾಡಿದಾಗ, ಗೋಕರ್ಣ ದೇವಸ್ಥಾನವನ್ನು ಸಾರ್ವಜನಿಕ ದೇವಾಲಯ ಎಂದು ಘೋಷಿಸಲಾಯಿತು. ಈ ಆದೇಶವನ್ನು ಪ್ರಶ್ನಿಸಿ ದೇವಸ್ಥಾನದ ಟ್ರಸ್ಟಿ ಬಾಲಚಂದ್ರ ದೀಕ್ಷಿತ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ನಡುವೆ, ಹೈಕೋರ್ಟ್ 2006 ರಲ್ಲಿ ಶ್ರೀ ಸಹಸ್ರ ಲಿಂಗೇಶ್ವರ ಪ್ರಕರಣದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಧರ್ಮಾದಾಯ ದತ್ತಿ ಕಾನೂನಿನಡಿ ಟ್ರಸ್ಟಿಗಳ ನೇಮಕವೇ ಸಂವಿಧಾನ ಬಾಹಿರ ಎಂದು ಘೋಷಿಸಿತು. ಇಂದಿಗೂ ಈ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ.
ಮಠದ ಸುಪರ್ದಿಗೆ ದೇವಸ್ಥಾನ:
ಕಾನೂನು ಸಂಘರ್ಷ ಮತ್ತು ಗೊಂದಲಗಳ ನಡುವೆ ರಾಜ್ಯ ಸರ್ಕಾರ 2006ರ ನ.17ರಂದು ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಿಸಿತ್ತು. ಇದನ್ನು ಪ್ರಶ್ನಿಸಿ ಬಾಲಚಂದ್ರ ದೀಕ್ಷಿತ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಿಸಿದಾಗಲೂ ರಾಮಚಂದ್ರಾಪುರ ಮಠ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ಬದಲಿಗೆ ಕೆಲವರು ಗೋಕರ್ಣ ದೇವಸ್ಥಾನವನ್ನು ಸಾರ್ವಜನಿಕ ದೇವಸ್ಥಾನದ ಪಟ್ಟಿಯಿಂದ ಕೈಬಿಟ್ಟು, ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕೂಡಲೇ ಮನವಿ ಪರಿಗಣಿಸಿದ ಸರ್ಕಾರ 2008ರ ಆ.12ರಂದು ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ವಹಿಸಿಕೊಟ್ಟಿತ್ತು.
ಹೈಕೋರ್ಟ್ ತೀರ್ಪು:
ಮಠದ ಸುಪರ್ದಿಗೆ ದೇವಸ್ಥಾನ ಹಸ್ತಾಂತರಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಅನೇಕರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. 2018ರ ಆ.10ರಂದು ತೀರ್ಪು ನೀಡಿದ ಹೈಕೋರ್ಟ್, ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಯಿಂದ ಕೈಬಿಡುವ ಯಾವ ಅಧಿಕಾರವೂ ಇಲ್ಲ. ದೇವಸ್ಥಾನವು ರಾಮಚಂದ್ರಾಪುರ ಮಠಕ್ಕೆ ಸೇರಿದೆ ಎಂದು ಕೊಟ್ಟಿರುವ ಪುರಾವೆಗಳು ನಿರ್ಣಾಯಕವೂ ಅಲ್ಲ. ಈ ವಿಷಯ ಸಿವಿಲ್ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಮೂಲಕ ಸಿಂಧುವಾಗಬೇಕು. ಹೀಗಾಗಿ ರಾಮಚಂದ್ರಾಪುರ ಮಠಕ್ಕೆ ಅನುಕೂಲವಾಗುವಂತೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಹಸ್ತಾಂತರಿಸಿರುವ ಕ್ರಮ ಸರಿಯಲ್ಲ ಎಂದಿತಲ್ಲದೇ, ದೇವಾಲಯದ ಆಡಳಿತ ಮೇಲ್ವಿಚಾರಣೆಗೆ ಸಮಿತಿ ರಚಿಸಲು ನಿರ್ದೇಶಿಸಿತ್ತು.
ಸುಪ್ರೀಂ ಕೋರ್ಟ್ ಆದೇಶ:
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಠ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಈ ವಿಶೇಷ ಮೇಲ್ಮನವಿಯ (ಎಸ್ ಎಲ್ ಪಿ) ವಿಚಾರಣೆ ನಡೆಸಿದ ಸಿಜೆಐ ಎಸ್ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠವು 2021ರ ಏಪ್ರಿಲ್ 19 ರಂದು ತೀರ್ಪು ನೀಡಿ, 2003ರಲ್ಲಿ ಧಾರ್ಮಿಕ ದತ್ತಿ ಕಾಯ್ದೆ ಜಾರಿ ಮಾಡಿ ದೇವಸ್ಥಾನವನ್ನು ಸಾರ್ವಜನಿಕಗೊಳಿಸಿದಾಗ ಮಠ ಅದನ್ನು ಪ್ರಶ್ನಿಸಿರಲಿಲ್ಲ. ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸುವ ಮುನ್ನ ಅದು ಮಠಕ್ಕೆ ಸೇರಿದ್ದೆ ಎಂಬ ವಿಚಾರಣೆಯೂ ನಡೆದಿಲ್ಲ. ಅಂಥ ವಿಚಾರಣೆ ನಡೆಸಿದ್ದಕ್ಕೆ ಪುರಾವೆಯೂ ಇಲ್ಲ.
ಮಠಕ್ಕೆ ಸೇರಿದ ದೇವಸ್ಥಾನ ಎಂಬುದನ್ನು ಸಾಬೀತು ಮಾಡುವ ಯಾವ ಅಂಶವನ್ನೂ ಒದಗಿಸಿಲ್ಲ. ಕೇವಲ ಗ್ರಾಮ ಪಂಚಾಯಿತಿ ಅನುಮೋದನೆ ಇದೆ ಹಾಗೂ ದೇವಸ್ಥಾನದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ದೇವಸ್ಥಾನವನ್ನು ಮಠಕ್ಕೆ ನೀಡಲು ಕೈಗೊಂಡಿರುವ ನಿರ್ಣಯ ಕಾನೂನು ಬಾಹಿರ. ಹಾಗೂ ಮಠಕ್ಕೆ ದೇವಸ್ಥಾನ ಸೇರಬೇಕೆಂಬ ವಿಚಾರವಿದ್ದರೆ ಅದನ್ನು ಸಿವಿಲ್ ದಾವೆಯಲ್ಲಿ ನಿರ್ಣಯಿಸಬೇಕೇ ವಿನಃ ಈ ರೀತಿಯಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಹಾಗೆಯೇ, ದೇವಸ್ಥಾನದ ನಿರ್ವಹಣೆಗೆ 15 ದಿನಗಳ ಒಳಗೆ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ. ಎನ್. ಶ್ರೀಕೃಷ್ಣ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು. ಉತ್ತರ ಕನ್ನಡ ಜಿಲ್ಲಾಧಿಕಾರಿ, ಎಸ್ಪಿ, ಕುಮಟಾ ಎಸಿ, 2 ಉಪಾಧಿವಂತರು ಸಮಿತಿ ಸದಸ್ಯರಿರಬೇಕು. ಹಾಗೆಯೇ ಈ ಅವಧಿಯೊಳಗೆ ರಾಮಚಂದ್ರಾಪುರ ಮಠ ಗೋಕರ್ಣ ಮಹಾಬಲೇಶ್ವರ ದೇವಸ್ಥಾವನ್ನು ಸಮಿತಿಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿದೆ.