ಬೆಂಗಳೂರು : ಜಿಕೆವಿಕೆ ಆವರಣದಲ್ಲಿ ಇಂದಿನಿಂದ ಕೃಷಿ ಮೇಳ ಪ್ರಾರಂಭವಾಗಿದೆ. ಮೇಳದಲ್ಲಿ 25 ಮಳಿಗೆಗಳನ್ನು ತೆರೆಯಲಾಗಿದ್ದು, ಯುರೋಪಿಯನ್ ಜೇನು ಮಳಿಗೆ ಹೆಚ್ಚು ಆಕರ್ಷಣೆ ಪಡೆದಿದೆ.
ಕೊರೊನಾ ನಡುವೆಯು ರಾಜ್ಯದ ವಿವಿಧ ಭಾಗಗಳಿಂದ ಮೇಳಕ್ಕೆ ಬಂದ ರೈತರು ಯುರೋಪಿಯನ್ ಜೇನು ಸಾಕಾಣಿಕೆ ಕುರಿತು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಜೇನು ಸಾಕಾಣಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಮಳಿಗೆಯನ್ನು ತೆರೆಯಲಾಗಿದೆ. ಜೇನು ನೊಣ ಕುಳಿತು ರಸ ಹೀರಿ, ಬೆಳೆ ನಾಶವಾಗುತ್ತೆ ಎಂದು ರೈತರು ಅವನ್ನು ನಾಶ ಮಾಡಲು ಕೀಟನಾಶಕ ಬಳಸುತ್ತಾರೆ. ಆದರೆ, ಈ ಬಾರಿಯ ಕೃಷಿ ಮೇಳದಲ್ಲಿ ಜೇನು ನೊಣಗಳು ಕುಳಿತರೆ ಹೆಚ್ಚು ಇಳುವರರಿ ಬರುತ್ತದೆ ಎಂದು ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಸೂರ್ಯ ಕಾಂತಿ ಶೇ. 45-50 , ಕುಂಬಳ ಜಾತಿಯ ಬೆಳೆ ಶೇ. 100-120, ಈರುಳ್ಳಿ ಶೇ. 25-30 ಇಳುವರಿ ನೀಡುತ್ತದೆ. ಇತರ ಬೆಳೆಗಳು ಹೆಚ್ಚು ಇಳುವರಿ ನೀಡುತ್ತದೆ ಎಂದು ಮಳಿಗೆಯವರು ತಿಳಿಸಿದ್ದಾರೆ.
ಜೇನುನೊಣಗಳು ಬಹುಪಯೋಗಿ ಕೀಟಗಳಲ್ಲೊಂದು, ಇವುಗಳಲ್ಲಿ 5 ಪ್ರಮುಖ ಪ್ರಭೇದಗಳಿವೆ. ಇವುಗಳು ನಮ್ಮ ರಾಜ್ಯದ ಹವಾಮಾನಕ್ಕೆ ಅನುಗುಣವಾಗಿ ಹೊಂದಿಕೊಂಡಿರುವುದು ವಿಶೇಷ. ಜೇನು ನೊಣಗಳಿಂದ ಜೇನು ತುಪ್ಪ, ಮೇಣ, ರಾಜಶಾಹಿರಸ, ಪರಾಗ, ಜೇನು ಅಂಟು ಮತ್ತು ಜೇನು ವಿಷವನ್ನು ಪಡೆದುಕೊಳ್ಳುವುದರ ಜೊತೆಗೆ ಪರಾಗ ಸ್ಪರ್ಶಕ್ರಿಯೆಯ ಮೂಲಕ ಬೆಳೆಗಳ ಇಳುವರಿ ಹೆಚ್ಚಿಸಬಹುದು. ರೈತರ ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಜೇನು ಸಾಕಣಿಕೆ ಒಂದು ಅತ್ಯದ್ಬುತ ಉದ್ಯಮವಾಗಿದೆ. ಬಿಡುವಿನ ಸಮಯವನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಜೇನು ಸಾಕಾಣಿಕೆ ಮಾಡಹುದು ಮಳಿಗೆಯಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು.