ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಮ್ಮ ಬೆಂಬಲಿಗರಿಗೆ ಕೊಡಿಸಲು ಲಾಬಿ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಬಳಿ ಹೊಸ ದಾಳವನ್ನು ಉರುಳಿಸಿದ್ದಾರೆ ಎನ್ನಳಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಬೇರೆಯವರ ಬದಲು ತಮ್ಮನ್ನೇ ನೇಮಕ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಆಪ್ತ ವಲಯದಿಂದ ಕೇಳಿಬಂದಿದೆ.
ತಮಗೆ ಕಾಂಗ್ರೆಸ್ ಅಧ್ಯಕ್ಷಗಿರಿ ನೀಡಿದರೆ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೆಚ್ಚು ಅನುಕೂಲವಾಗುತ್ತದೆ ಎನ್ನುವ ವಾದವನ್ನು ತಮ್ಮದೇ ಲೆಕ್ಕಾಚಾರಗಳ ಮೂಲಕ ಸಿದ್ದು ಅವರು ಹೈಕಮಾಂಡ್ ಮುಂದೆ ಇಟ್ಟಿದ್ದಾರೆನ್ನಲಾಗಿದೆ.
ಮಾಜಿ ಸಚಿವ ಡಿಕೆ ಶಿವಕುಮಾರ್, ಎಂಬಿ ಪಾಟೀಲ್, ಈಶ್ವರ್ ಖಂಡ್ರೆ, ಕೆ. ಹೆಚ್ ಮುನಿಯಪ್ಪ, ಬಿ. ಕೆ ಹರಿಪ್ರಸಾದ್ ಸತೀಶ್ ಜಾರಕಿಹೊಳಿ , ಕೃಷ್ಣ ಭೈರೇಗೌಡ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ ಯಾರನ್ನ ನೇಮಕ ಮಾಡಿದರೂ ಗೊಂದಲಗಳು ಉಂಟಾಗುತ್ತವೆ. ತಮ್ಮನ್ನ ನೇಮಿಸಿದರೆ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಪಕ್ಷ ಮುನ್ನಡೆಸಿಕೊಂಡು ಹೋಗುವುದಾಗಿ ಹೈಕಮಾಂಡ್ ಬಳಿ ಹೇಳಿದ್ದಾರೆನ್ನಲಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ತಾವು ಈಗಾಗಲೇ ನೀಡಿರುವ ರಾಜೀನಾಮೆ ಅಂಗೀಕರಿಸಬೇಕು. ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಹೆಚ್. ಕೆ. ಪಾಟೀಲ್, ರಮೇಶ್ ಕುಮಾರ್ ಅಂತವರನ್ನು ನೇಮಿಸಿದರೆ ಸೂಕ್ತವೆಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯನವರು ಪ್ರಯತ್ನಿಸಬಹುದೆನ್ನುವ ವದಂತಿಗಳು ಹಬ್ಬಿದ್ದವು.
ಸಿದ್ದರಾಮಯ್ಯನವರ ವಾದ ಏನು...?
ರಾಜ್ಯದಲ್ಲಿ ಪ್ರಮುಖ ಸಮುದಾಯದವರಾದ ಲಿಂಗಾಯತರು ಬಿಜೆಪಿಗೆ, ಒಕ್ಕಲಿಗರು ಜೆಡಿಎಸ್ ಗೆ ಬೆಂಬಲವಾಗಿದ್ದಾರೆ. ಈ ಎರಡೂ ಸಮುದಾಯದವರಿಗೆ ಪರ್ಯಾಯವಾಗಿ ಅಲ್ಪಸಂಖ್ಯಾತರ, ದಲಿತರ, ಹಿಂದುಳಿದವರ ಮತಗಳನ್ನು ಪಕ್ಷಕ್ಕೆ ಸೆಳೆಯಬಲ್ಲವರು ಕಾಂಗ್ರೆಸ್ ಅಧ್ಯಕ್ಷರಾದರೆ ಸೂಕ್ತವೆನಿಸುತ್ತದೆ. ಸದ್ಯ ಅಹಿಂದ ಮತಗಳನ್ನು ಸೆಳೆಯಬಲ್ಲ ನಾಯಕ ತಾವೇ ಆಗಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಪದವಿ ತಮಗೆ ನೀಡಿದರೆ ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಬರುವ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಮತ್ತು ಜೆಡಿಎಸ್ ನಿಂದ ಸಾಕಷ್ಟು ನಾಯಕರನ್ನು ಪಕ್ಷಕ್ಕೆ ಕರೆತರಬೇಕಾಗುತ್ತದೆ. ತಾವು ಅಧ್ಯಕ್ಷರಾದರೆ ಹೆಚ್ಚಿನ ನಾಯಕರು ಕಾಂಗ್ರೆಸ್ ಸೇರಲು ಒಲವು ವ್ಯಕ್ತಪಡಿಸಲಿದ್ದಾರೆ ಎನ್ನುವ ಮಾತನ್ನೂ ಸಿದ್ದರಾಮಯ್ಯ ಹೈಕಮಾಂಡ್ ಬಳಿ ಹೇಳಿದ್ದಾರೆಂದು ತಿಳಿದುಬಂದಿದೆ.
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಹೆಚ್ಚಿನ ಅನುಕೂಲ ಪಕ್ಷಕ್ಕಾಗದು. ಆದಾಯತೆರಿಗೆ ಇಡಿ ಪ್ರಕರಣ ಇರುವುದರಿಂದ ಕಳಂಕಿತರನ್ನು ಕಾಂಗ್ರೆಸ್ ನೇಮಕಮಾಡಿದೆ ಎಂದು ಬಿಜೆಪಿ ರಾಜಕೀಯ ಲಾಭ ಪಡೆಯುವ ಸಂಭವ ಹೆಚ್ಚಿದೆ ಎಂದು ತಿಳಿಸಿದ್ದಾರೆನ್ನಲಾಗಿದೆ.
ಡಿಕೆಶಿ ನೇಮಕದಿಂದ ಒಕ್ಕಲಿಗರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹರಿದುಬರುವುದಿಲ್ಲ. ಒಕ್ಕಲಿಗರು ಜೆಡಿಎಸ್ ಕಡೆಯೇ ಒಲವು ಹೊಂದಿದ್ದಾರೆ. ಇನ್ನು ಎಂ ಬಿ ಪಾಟೀಲ್ ಅವರನ್ನು ನೇಮಿಸಿದರೆ ಲಿಂಗಾಯತ ಮತಗಳನ್ನು ಸೆಳೆಯುವುದು ಕಷ್ಟ. ಬಿಜೆಪಿಯವರಾದ ಮುಖ್ಯಮಂತ್ರಿ ಯಡಿಯೂರಪ್ಪನವರಷ್ಟು ಮತ ಸೆಳೆಯುವ ಶಕ್ತಿ ಎಂ. ಬಿ. ಪಾಟೀಲ್ ಗೆ ಇಲ್ಲ. ಮೇಲಾಗಿ ಡಿಕೆಶಿ ಮತ್ತು ಎಂ. ಬಿ ಪಾಟೀಲ್ ನಡುವೆ ಹೊಂದಾಣಿಕೆ ಕೊರತೆ ಸಹ ಹೆಚ್ಚಾಗಿರುವುದರಿಂದ ಇವರಿಬ್ಬರಲ್ಲಿ ಯಾರನ್ನ ನೇಮಿಸಿದರೂ ಅದು ಪಕ್ಷಕ್ಕೆ ನಷ್ಟವಾಗಲಿದೆ ಎಂದು ಸಿದ್ದರಾಮಯ್ಯ ಹೈಕಮಾಂಡ್ ಬೇಟಿ ವೇಳೆ ಹೇಳಿದ್ದಾರೆನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನ ನೇಮಿಸಬೇಕೆಂದು ಅಭಿಪ್ರಾಯ ಸಂಗ್ರಹಿಸುತ್ತಿರುವಾಗ ಸಿದ್ದರಾಮಯ್ಯನವರ ಈ ಹೊಸ ಬೇಡಿಕೆ ಕಾಂಗ್ರೆಸ್ ಹೈಕಮಾಂಡನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸಿದೆ.