ಬೆಂಗಳೂರು: ಖಾಸಗಿ ಉದ್ಯೋಗಗಳಲ್ಲಿ ಶೇ. 75ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂದು ಕನ್ನಡ ನುಡಿ ಕನ್ನಡ ಗಡಿ ಜಾಗೃತಿ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕರ್ನಾಟಕ ಕೈಗಾರಿಕಾ ಉದ್ಯೋಗಗಳ ಅಧಿನಿಯಮಕ್ಕೆ ತಿದ್ದುಪಡಿ ಮಾಡಿ ಮೇ 24ರಂದು ಅಧಿಸೂಚನೆ ಹೊರಡಿಸಿ ಸರೋಜಿನಿ ಮಹಿಷಿಯ ವರದಿಯಲ್ಲಿರುವ ಕೆಲವು ಅಂಶಗಳನ್ನು ಖಾಸಗಿ ಉದ್ಯಮಗಳಿಗೆ ಸೂಚಿಸಲಾಗಿತ್ತು. ಆದರೆ, ಮಹಿಷಿ ವರದಿಯನ್ನು ವಿರೋಧಗೊಳಿಸುವ ಈ ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿ ಕಾರ್ಮಿಕ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಇ.ಮಣ್ಣಿವಣ್ಣನ್ ಅವರ ನೇತೃತ್ವದಲ್ಲಿ ಕರೆದಿದ್ದ ಸಭೆಯಲ್ಲಿ ಮಹಿಷಿ ವರದಿಯ ಸಲಹೆಯಂತೆ 15 ವರ್ಷ ಕಡ್ಡಾಯವಾಗಿ ಕರ್ನಾಟಕದಲ್ಲಿ ವಾಸವಾಗಿರಬೇಕು ಮತ್ತು ಕನ್ನಡ ಓದಲು ಬರೆಯಲು ಬರುವವರಿಗೆ ಮಾತ್ರ ಖಾಸಗಿ ಉದ್ಯಮಗಳ ಸಿ ಮತ್ತು ಡಿ ದರ್ಜೆ ಹುದ್ದೆಗಳ ಶೇ. 75ರಷ್ಟು ಮೀಸಲನ್ನು ಕಡ್ಡಾಯಗೊಳಿಸುವ ಆದೇಶ ಹೊರಡಿಸುವುದಾಗಿ ಕಾರ್ಯದರ್ಶಿ ಪ್ರಕಟಿಸಿದ್ದಾರೆ. ಆದ್ದರಿಂದ ಈ ತಿದ್ದುಪಡಿಯನ್ನು ಸಂಪುಟ ಸಭೆಗೆ ಕಳುಹಿಸುವ ಮುನ್ನ ತಿದ್ದುಪಡಿಯ ವಿಚಾರ ಕುರಿತು ಚರ್ಚಿಸಬೇಕು ಎಂದರು.
ಸಿಬ್ಬಂದಿ ಆಯ್ಕೆ ಆಯೋಗವು ನಡೆಸುವ ನೇಮಕಾತಿ ಆಯ್ಕೆ ಪರೀಕ್ಷೆಗಳಲ್ಲಿ ಕನ್ನಡದಲ್ಲೂ ಬರೆಯಲು ಅವಕಾಶವಿರಬೇಕು. ಬೆಂಗಳೂರು ಪ್ರಾದೇಶಿಕ ಕಚೇರಿಯ ವ್ಯಾಪ್ತಿಯಲ್ಲಿ ಬರುವ ರಾಜ್ಯಗಳ ಅಭ್ಯರ್ಥಿಗಳಿಗೆ ಮಾತ್ರ ಆಯ್ಕೆಯಲ್ಲಿ ಪಾಲ್ಗೊಳ್ಳುವ ಅವಕಾಶವಿರಬೇಕು ಎಂದು ಒತ್ತಾಯಿಸಿದರು.