ಬೆಂಗಳೂರು: ಅಪಹರಿಸಿದ್ದ ದುಷ್ಕರ್ಮಿಗಳಿಂದ 12 ವರ್ಷದ ಬಾಲಕಿಯೋರ್ವಳು ತಪ್ಪಿಸಿಕೊಂಡು, ಸುರಕ್ಷಿತವಾಗಿ ಮನೆ ಸೇರಿದ ಘಟನೆ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಇದೇ ತಿಂಗಳು 3ರಂದು ಈ ಘಟನೆ ನಡೆದಿದೆ. ಮೈಸೂರು ಬ್ಯಾಂಕ್ ಸರ್ಕಲ್ ಎಂಎನ್ ಲೈನ್ ರಸ್ತೆಯಲ್ಲಿ 12 ವರ್ಷದ ಶಾಲಾ ಬಾಲಕಿ ಟ್ಯೂಷನ್ಗೆ ಹೋಗುವಾಗ ಆಟೊವೊಂದರಲ್ಲಿ ಬಂದ ಕಿರಾತಕರು, ನಿಮ್ಮ ತಂದೆ ಸ್ಪೀಟ್ ತರಲು ಹೇಳಿದ್ದಾರೆ ಅದಕ್ಕೆ ನಮ್ಮಜೊತೆ ಬಾ ಎಂದು ಕರೆದಿದ್ದರು. ಬಾಲಕಿ ಇದನ್ನು ನಿರಾಕರಿಸಿದರೂ ಬಲವಂತವಾಗಿ ಹೊತ್ತೊಯ್ದಿದ್ದರು. ಬಳಿಕ ಯಾರೂ ಇಲ್ಲದ ಜಾಗಕ್ಕೆ ಕರೆದೊಯ್ದು ಬಾಲಕಿಯ 2.5 ಗ್ರಾಂನ ಚಿನ್ನದ ಕಿವಿಯೋಲೆ ಹಾಗೂ ಬೆಳ್ಳಿ ಕಾಲ್ಗೆಜ್ಜೆ ಬಿಚ್ಚಿಸಿಕೊಂಡಿದ್ದರು.
ಆ ಬಳಿಕ ಬಾಲಕಿ ಅದು ಹೇಗೋ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಾಲಕಿ ಓಡಿ ಬಂದು ರಸ್ತೆಯಲ್ಲಿ ಸಿಕ್ಕ ಪೇದೆಯೊಬ್ಬರ ಬಳಿ ನಡೆದ ಘಟನೆ ವಿವರಿಸಿದ್ದಾಳೆ. ನಂತರ ಬಾಲಕಿ ತಂದೆಗೆ ವಿಷಯ ತಿಳಿಸಿ ಸ್ಥಳಕ್ಕೆ ಕರೆಸಿದ್ದರು. ಈ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ, ಸುಲಿಗೆ ಅಡಿ ಕೇಸ್ ದಾಖಲಾಗಿದೆ.