ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗಭೂಮಿ ಕಲಾವಿದ ಹಾಗೂ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರ ಆಸೆಯಂತೆಯೇ ಸರಳ ಹಾಗೂ ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ಕಲ್ಲಪಲ್ಲಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದು, ಪಂಚಭೂತಗಳಲ್ಲಿ ಲೀನರಾದರು.
ಗಿರೀಶ್ ಕಾರ್ನಾಡ್(81) ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಲಾವೆಲ್ಲೆ ರಸ್ತೆಯ ನಿವಾಸದಲ್ಲಿ ವಿಧಿವಶರಾದರು. ಅವರ ಆಸೆಯಂತೆ ಯಾವುದೇ ಸರ್ಕಾರಿ ಗೌರವ ಹಾಗೂ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ಸರಳವಾಗಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಅಂತಿಮ ದರ್ಶನ ಪಡೆಯಲು ಮನೆ ಬಳಿ ಕುಟುಂಬಸ್ಥರು, ಸಂಬಂಧಿಕರು ಹೊರತುಪಡಿಸಿ ರಾಜಕೀಯ ನಾಯಕರು ಹಾಗೂ ಇನ್ನಿತ ಗಣ್ಯರು ಬರಕೂಡದು. ಸಾಮಾನ್ಯ ವ್ಯಕ್ತಿಯಂತೆ ಸರಳವಾಗಿ ಅಂತ್ಯ ಸಂಸ್ಕಾರ ನೆರವೇರಿಸಬೇಕೆಂಬುದು ಕಾರ್ನಾಡ್ ಇಚ್ಛೆಯಾಗಿತ್ತು. ಅದರಂತೆ ಅವರ ಕುಟುಂಬಸ್ಥರು ಅವರ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದಾರೆ.
ಅಂತಿಮ ದರ್ಶನ ಪಡೆಯಲು ವಿದ್ಯುತ್ ಚಿತಾಗಾರ ಬಳಿ ನಿರ್ದೇಶಕ ಟಿ.ಎಸ್.ನಾಗಾಭರಣ, ರಂಗಕರ್ಮಿಗಳಾದ ಜಯಶ್ರೀ, ಶ್ರೀನಿವಾಸ್ ಕಪ್ಪಣ್ಣ, ಗಾಯಕಿ ಸಂಗೀತಾ ಕಟ್ಟಿ, ನಿವೃತ್ತ ಐಎಎಸ್ ಅಧಿಕಾರಿ ಚೀರಂಜಿವಿ ಸಿಂಗ್ ಸೇರಿದಂತೆ ಇನ್ನಿತರರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಸರ್ಕಾರದ ಪರವಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಂದು ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಕಾರ್ನಾಡ್ ಅವರ ಕುಟುಂಬಸ್ಥರು ಸರ್ಕಾರಿ ಗೌರವ ಸರ್ಮಪಣೆಗೆ ಒಪ್ಪಲಿಲ್ಲ. ಹಾಗಾಗಿ ಅವರು ಕುಟುಂಬದ ಇಚ್ಛೆಯಂತೆ ಸರಳವಾಗಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದ್ದು, ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಮುಂದುವರಿಯಲಿದೆ.