ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಈ ಬಾರಿ ಗಣೇಶ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಜೋರಾಗಿ ನಡೆಯುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಜನರು ಉತ್ಸುಕರಾಗಿದ್ದಾರೆ. ಗಣೇಶ ಹಬ್ಬ ಬಂತು ಅಂದ್ರೆ ಸಾಕು ಯುವಕರಿಗೆ ಎಲ್ಲಿಲ್ಲದ ಸಂಭ್ರಮ. ಬೆಂಗಳೂರಿನ ತಮ್ಮ ಏರಿಯಾಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಘ್ನ ವಿನಾಯಕನ ನೆನೆಯೋದೇ ಖುಷಿ. ಈ ಬಾರಿ ಗಣೇಶನ ಜತೆ ಕಾಂತಾರ ಮೂರ್ತಿಗಳು ಕೂಡ ಹಬ್ಬದ ಉತ್ಸವಕ್ಕೆ ಎಂಟ್ರಿ ನೀಡ್ತಿವೆ.
ಪ್ರತಿ ವರ್ಷ ನಗರದ ಗಲ್ಲಿಗಳಿಗೆ ವಿಭಿನ್ನ ಆಕಾರದ ಗಣೇಶಮೂರ್ತಿಗಳು ಎಂಟ್ರಿಯಾಗ್ತಿದ್ದವು. ಆದರೆ ಈ ಬಾರಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ರಿಷಬ್ ಶೆಟ್ಟಿ ಖ್ಯಾತಿಯ ಕಾಂತಾರ ಟ್ರೆಂಡ್ ಜೋರಾಗಿದೆ. ಕಾಂತಾರ ಸಿನಿಮಾದ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಕಲಾವಿದರು ಅಂಥ ಮೂರ್ತಿಗಳನ್ನು ಹೆಚ್ಚು ತಯಾರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ರಾಜ್ಗೋಪಾಲ್ ಕುಟುಂಬದ ಕಲಾವಿದರು ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವದರಲ್ಲಿ ನಿರತರಾಗಿದ್ದಾರೆ. ಯುವಜನರು ಹಿಂದಿನ ಬಾರಿ ದಿವಂಗತ ನಟ ಪುನೀತ್ ರಾಜ್ಕುಮಾರ್ ಇರುವ ಗಣೇಶ ಮೂರ್ತಿಗಳಿಗೆ ಹೆಚ್ಚು ಒತ್ತು ನೀಡಿದ್ದರು. ಈ ಸಲ ದೇಶಾದ್ಯಂತ ಹವಾ ಸೃಷ್ಟಿಸಿದ ಕಾಂತಾರ ಸಿನಿಮಾದ ಕಾಂತಾರ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಹತ್ತಾರು ಕಾಂತಾರ ಗಣೇಶಮೂರ್ತಿ ತಯಾರಿಸಿ ಕಲಾವಿದರು ಮಂಡ್ಯ, ಮೈಸೂರು, ತುಮಕೂರು, ಬೆಂಗಳೂರು ಕಡೆಗೆ ಕಳುಹಿಸಿ ಕೊಡುತ್ತಿದ್ದಾರೆ. ವಿವಿಧ ಆಕಾರದ ಗಣೇಶಗಳು ಕಲಾವಿದರ ಕೈಚಳಕದಲ್ಲಿ ಅರಳಿವೆ.
ಮಣ್ಣಿನ ಗಣಪಗಳನ್ನು ತಯಾರಿಸುವ ರಾಜ್ಗೋಪಾಲ್ ಕುಟುಂಬ: ಮಣ್ಣಿನ ಗಣೇಶ ತಯಾರಿಕೆಯನ್ನು 60 ವರ್ಷಗಳಿಂದ ಮೂಲ ಕಾಯಕ ಮಾಡಿಕೊಂಡಿರೋ ರಾಜ್ಗೋಪಾಲ್ ಕುಟುಂಬ, ವರ್ಷವೆಲ್ಲ ಇಡೀ ಕುಟುಂಬದ ಸದಸ್ಯರು ಸೇರಿಕೊಂಡು ಸಾವಿರಾರು ಮಣ್ಣಿನ ಗಣೇಶ ಮೂರ್ತಿಗಳನ್ನು ರೆಡಿ ಮಾಡುತ್ತಾರೆ. ಅದರಲ್ಲಿಯೂ ಪಿಒಪಿ ಗಣಪನಿಗೆ ಅಷ್ಟು ಮಹತ್ವವನ್ನು ನೀಡದಿರುವ ಈ ಕುಟುಂಬ, ಮಣ್ಣಿನ ಗಣೇಶ ಮೂರ್ತಿಗಳನ್ನು ಹೆಚ್ಚು ಮಾಡಿ ಅದಕ್ಕೆ ಬಣ್ಣದ ಹೈಟೆಕ್ ಟಚ್ ನೀಡ್ತಾರೆ.
ಇನ್ನು ಈ ಬಾರಿಯೂ ಒಂದು ಅಡಿಯಿಂದ ಹತ್ತು ಅಡಿ ಮಣ್ಣಿನ ಗಣೇಶ ಮೂರ್ತಿಗಳು ಸಿದ್ಧಗೊಂಡಿವೆ. ಪಿಒಪಿ ಪಿನಿಷಿಂಗ್ಗೂ ಕಡಿಮೆ ಇಲ್ಲದಂತೆ ಈ ಕುಟುಂಬದ ಕಲಾವಿದರು ಮಣ್ಣಿನ ಮೂರ್ತಿಗಳಿಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಅದರಲ್ಲೂ ಗಣೇಶನ ಪಕ್ಕದಲ್ಲಿ ಕಾಂತಾರ ಮೂರ್ತಿ ಕೂಡ ಕಂಗೊಳಿಸುತ್ತಿದ್ದು, ಈ ಸಲ ನಗರಗಳಲ್ಲಿ ಕಾಂತಾರ ಗಣೇಶ ಸದ್ದು ಮಾಡಲಿದೆ.
ಒಟ್ಟಾರೆ ಗಣೇಶ ಹಬ್ಬದ ಸಂಭ್ರಮ ಇನ್ನೂ ಎರಡು ದಿನ ಬಾಕಿ ಇದ್ದು, ಎಲ್ಲೆಡೆ ಯುವಕರು ವಿಜೃಂಭಣೆಯಿಂದ ಗಜಮುಖನ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂಓದಿ:ಬೆಳಗಾವಿ: ರುದ್ರಾಕ್ಷಿ ಗಣಪ ನಿರ್ಮಿಸಿ ಪರಿಸರ ಜಾಗೃತಿ ಸಂದೇಶ