ಬೆಂಗಳೂರು: ರಾಜ್ಯದಲ್ಲಿ ಯಾವುದೇ ಶಾಲೆಗಳು ಆರಂಭವಾಗಬೇಕಾದರೂ ಅಥವಾ ಆರಂಭವಾಗಿದ್ದರೂ ಕಟ್ಟಡ ಸುರಕ್ಷತಾ ಪ್ರಮಾಣಪತ್ರವನ್ನು ಪಡೆಯುವುದು ಕಡ್ಡಾಯ. ಆದರೆ ಈ ನಿಯಮ ಪಾಲಿಸದಿರುವ ಶಾಲೆಗಳು ಮುಚ್ಚುವ ಭೀತಿಯಲ್ಲಿವೆ.
ಶಾಲೆಗಳ ಕಟ್ಟಡ ಹಾಗೂ ಕಟ್ಟಡದ ಗುಣಮಣ್ಣದ ಬಗ್ಗೆ ಪ್ರಮಾಣಪತ್ರ ಹಾಗೂ ಅಗ್ನಿಶಾಮಕ ಇಲಾಖೆಯಿಂದ ಅಗ್ನಿನಂದಕ ಉಪಕರಣಗಳ ಲಭ್ಯತೆಯು ಕಡ್ಡಾಯ ಮಾಡಲಾಗಿದೆ. ಆದರೆ ರಾಜ್ಯದ ಹಲವು ಖಾಸಗಿ ಶಾಲೆಗಳು ಕಟ್ಟಡ ಸುರಕ್ಷತಾ ಪ್ರಮಾಣಪತ್ರ ಹೊಂದಿರದೇ ಇರುವ ಕಾರಣಕ್ಕೆ ಶಿಕ್ಷಣ ಇಲಾಖೆ ಈ ಬಾರಿಯ ಶೈಕ್ಷಣಿಕ ವರ್ಷಕ್ಕೆ ಬ್ರೇಕ್ ಹಾಕಿದೆ. ಹೊಸ ಹಾಗೂ ನವೀಕರಣ ಕಟ್ಟಡದ ಪ್ರಸುತ್ತ ಸ್ಥಿತಿ ಬಗ್ಗೆ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದ್ದು, ಇದನ್ನು ಪಾಲಿಸದೇ ಇರುವ ಬರೋಬ್ಬರಿ 10 ಸಾವಿರ ಖಾಸಗಿ ಶಾಲೆಗಳು ಮುಚ್ಚುವ ಭೀತಿಯಲ್ಲಿವೆ.
ಅಧಿಕಾರಿಗಳಿಂದ ಶೋಷಣೆ:
ಕಳೆದ 2-3 ವರ್ಷದಿಂದ ಈಚೆಗೆ ಹೊಸ ನಿಯಮಗಳು ಸೇರಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಾರಿ ಮಾಡಲಾಗಿದೆ. ಆದರೆ ರಾಜ್ಯದ ಹಲವು ಶಾಲೆಗಳು ಇದನ್ನು ಪಾಲಿಸದೇ ಇರುವುದು ಕಂಡು ಬಂದಿದೆ. ಇತ್ತ ಈ ಸಂಬಂಧ ಅಧಿಕಾರಿಗಳು ಇಲ್ಲಸಲ್ಲದ ಶೋಷಣೆ ಮಾಡುತ್ತಿರುವುದಾಗಿ ಖಾಸಗಿ ಅನುದಾನಿತ-ಅನುದಾನ ರಹಿತ ಶಾಲೆಗಳ ಸಂಘದವರು ಆರೋಪಿಸಿದ್ದಾರೆ.
ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ:
ಶಾಲೆಗಳಲ್ಲಿ ಅಗ್ನಿ ಸುರಕ್ಷತೆ ಸಂಬಂಧ ಮಾತಾನಾಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್, ಅಗ್ನಿಶಾಮಕ ದಳದಿಂದ ಎನ್ಒಸಿ ಪಡೆಯುವುದು ಕಡ್ಡಾಯ. ಶಾಲೆಗಳಲ್ಲಿ ಫೈರ್ ಸೇಫ್ಟಿ ಇರಬೇಕು ಅನ್ನೋದು ಸುಪ್ರೀಂ ಕೋರ್ಟ್ ಆರ್ಡರ್ ಆಗಿದ್ದು, ಹೊಸ ನಿಯಮಗಳು ನಮ್ಮ ಸರ್ಕಾರ ಬಂದ ಮೇಲೆ ಜಾರಿಯಾದದ್ದು ಅಲ್ಲ ಎಂದು ತಿಳಿಸಿದರು.
ಹಿನ್ನೆಲೆ:
ತಮಿಳುನಾಡಿನ ಕುಂಭಕೋಣಂನಲ್ಲಿ ಕೃಷ್ಣ ಶಾಲೆ ಎಂಬಲ್ಲಿ 600 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. 2004ರಲ್ಲಿ ಬಿಸಿಯೂಟ ತಯಾರಿಸುವ ವೇಳೆ ಬೆಂಕಿ ಬಿದ್ದು 92 ಮಕ್ಕಳು ಶಾಲೆಯ ಅಗ್ನಿ ಅವಘಡದಲ್ಲಿ ಸುಟ್ಟು ಕರಕಲಾದರು. ಆಗ ಸುಪ್ರೀಂ ಕೋರ್ಟ್ನಲ್ಲಿ ಇದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈರ್ ಸೇಫ್ಟಿ ವಿಚಾರವಾಗಿ ತೀರ್ಪು ಬಂತು. ಆದರೆ ಅದು ಜಾರಿಗೆ ಬರಲಿಲ್ಲ. ಗುಜರಾತ್ನಲ್ಲಿ ಸಿವಿಲ್ ಕೋಚಿಂಗ್ ಕ್ಲಾಸ್ನಲ್ಲಿ ನಡೆದ ಅಗ್ನಿ ಅವಘಡದಲ್ಲಿ 32 ಮಂದಿ ಐಎಎಸ್, ಐಪಿಎಸ್ ಕನಸು ಕಂಡಿದ್ದವರು ಸುಟ್ಟು ಬೂದಿಯಾದರು. ಇಷ್ಟೆಲ್ಲಾ ದುರ್ಘಟನೆಗಳು ನಡೆದ ನಂತರವೇ ಈ ನಿಯಮ ಜಾರಿಗೆ ಬಂದಿದ್ದು ಎಂದು ತಿಳಿಸಿದರು.
ಹೀಗಾಗಿ, ಯಾವುದೇ ಶಾಲೆಗೆ ತೊಂದರೆ ಆಗದ ರೀತಿಯಲ್ಲಿ ಸರಳೀಕರಣ ನೀತಿಯನ್ನು ಯಾವ ರೀತಿಯಲ್ಲಿ ಮಾಡಬಹುದು ಎಂಬುದರ ಕುರಿತು ತೀರ್ಮಾನ ಮಾಡಲಾಗುತ್ತೆ. ಇಲಾಖೆಯಲ್ಲಿ ಅಧಿಕಾರಿಗಳು ತೊಂದರೆ ಕೊಡುವ ಸಂಬಂಧ ಶಿಕ್ಷಣ ಸಂಸ್ಥೆಗಳಿಂದ ದೂರು ಬರುತ್ತಿವೆ. ಇದಕ್ಕೆ ಪರ್ಯಾಯವಾಗಿ ಆನ್ಲೈನ್ ವ್ಯವಸ್ಥೆ ಮಾಡಲಾಗುವುದು ಎಂದರು.