ಬೆಂಗಳೂರು: ಭಾರತ ಮತ್ತು ಜರ್ಮನಿಯ ನಾರ್ತ್ ರಿನೆ-ವೆಸ್ಟ್ ಫಾಲಿಯಾ ಪ್ರಾಂತ್ಯದ ನಡುವೆ ತಂತ್ರಜ್ಞಾನ ಸಹಭಾಗಿತ್ವವನ್ನು (India-Germany Technology Partnership) ಮತ್ತಷ್ಟು ವಿಸ್ತರಿಸುವ ಮಹತ್ವಾಕಾಂಕ್ಷೆಯಿಂದ ಬೆಂಗಳೂರಿನಲ್ಲಿ ಪೂರ್ಣಪ್ರಮಾಣದ ಕಚೇರಿಯನ್ನು 2022ರ ಆರಂಭದಲ್ಲಿ ಅಧಿಕೃತವಾಗಿ ಆರಂಭಿಸಲಾಗುವುದು. ಇದು ಭಾರತ ಮತ್ತು ಜರ್ಮನಿಯ ಕಂಪನಿಗಳಿಗೆ ಹೆಬ್ಬಾಗಿಲಾಗಲಿದೆ ಎಂದು ಆ ಪ್ರಾಂತ್ಯದ ಆರ್ಥಿಕ, ನಾವೀನ್ಯತೆ, ಡಿಜಿಟಲೀಕರಣ ಮತ್ತು ಇಂಧನ ಸಚಿವ ಆಂಡ್ರಿಯಾಸ್ ಪಿಂಕ್ವರ್ಟ್ (Andreas Pinkwart) ತಿಳಿಸಿದ್ದಾರೆ.
ಬೆಂಗಳೂರು ತಂತ್ರಜ್ಞಾನ ಶೃಂಗವನ್ನು (Bengaluru Technology Summit) ಉದ್ದೇಶಿಸಿ ಗುರುವಾರದಂದು ವರ್ಚುವಲ್ ರೂಪದಲ್ಲಿ ಮಾತನಾಡಿದ ಅವರು, `ಭಾರತದ ಸ್ಟಾರ್ಟ್ ಅಪ್ (India's Start Up) ಮತ್ತು ಇತರ ಕಂಪನಿಗಳಿಗೆ ತಮ್ಮ ಪ್ರಾಂತ್ಯಕ್ಕೆ ಮುಕ್ತ ಸ್ವಾಗತವಿದೆ. ಭಾರತದಲ್ಲಿ ಬೆಂಗಳೂರು ಮತ್ತು ಕರ್ನಾಟಕ ಹೇಗೆ ತಂತ್ರಜ್ಞಾನದ ತೊಟ್ಟಲಾಗಿದೆಯೋ ಹಾಗೆ ಜರ್ಮನಿಯಲ್ಲಿ ನಮ್ಮ ಪ್ರಾಂತ್ಯವು ತಾಂತ್ರಿಕ ನೆಲೆಯಾಗಿದೆ' ಎಂದರು.
ಆಂಡ್ರಿಯಾಸ್ ಪಿಂಕ್ವರ್ಟ್ ಅವರು ಶೃಂಗದಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ ಭಾಗವಾಗಿ ನಡೆದ 'ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಲರ್ನಿಂಗ್‌ನೊಂದಿಗೆ (Artificial Intelligence and Machine Learning) ಭವಿಷ್ಯದ ಕಡೆಗೆ’ ಎನ್ನುವ ವಿಚಾರಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್ ಅಶ್ವತ್ಥ್ನಾರಾಯಣ್ ಅವರು ಮಾತನಾಡಿ, `2020ರ ನವೆಂಬರ್ನಲ್ಲಿ ಭಾರತ ಮತ್ತು ಜರ್ಮನಿ 20 ಒಡಂಬಡಿಕೆಗಳಿಗೆ ಸಹಿ ಹಾಕಿವೆ. ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್, ಐಒಟಿ, ಅನಲಿಟಿಕ್ಸ್, ರೋಬೋಟಿಕ್ಸ್, ಡೇಟಾ ಸೈನ್ಸ್ ಮುಂತಾದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಾಜ್ಯವನ್ನು ಜ್ಞಾನಾಧಾರಿತ ಸಮಾಜವನ್ನಾಗಿ ಕಟ್ಟಲಾಗುವುದು’ ಎಂದರು.
ಆಧುನಿಕ ತಂತ್ರಜ್ಞಾನ ವಲಯದಲ್ಲಿ ರಾಜ್ಯವು ಆರಂಭಿಸಿರುವ ಉತ್ಕೃಷ್ಟತಾ ಕೇಂದ್ರಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಜರ್ಮನಿಯ ನಾರ್ತ್ ರಿನೆ-ವೆಸ್ಟ್ ಫಾಲಿಯಾ ಪ್ರಾಂತ್ಯದಲ್ಲಿ ಕರ್ನಾಟಕ ಮೂಲದ ಇನ್ಫೋಸಿಸ್ ಮತ್ತು ವಿಪ್ರೋ ಕಂಪನಿಗಳು ಈಗಾಗಲೇ ನೆಲೆಯೂರಿವೆ. ಮುಂದಿನ ದಿನಗಳಲ್ಲಿ ಇಲ್ಲಿನ ಮತ್ತಷ್ಟು ಕಂಪನಿಗಳು ಅಲ್ಲಿ ತಮ್ಮ ಚಟುವಟಿಕೆ ಆರಂಭಿಸಲಿವೆ ಎಂದು ಹೇಳಿದರು.
ಕರ್ನಾಟಕ-ಕೇರಳ ವಲಯದ ಜರ್ಮನಿಯ ಕಾನ್ಸುಲ್ ಜನರಲ್ ಅಕಿಂ ಬುರ್ಕರ್ಟ್ ಮಾತನಾಡಿ, ಸದ್ಯದಲ್ಲೇ ಆರಂಭವಾಗಲಿರುವ ಕಚೇರಿಯಿಂದ ದಕ್ಷಿಣ ಏಷ್ಯಾ, ಜಪಾನ್ ಮತ್ತು ಆಫ್ರಿಕಾ ಜತೆ ಜರ್ಮನಿಯ ಕಂಪನಿಗಳು ವಹಿವಾಟು ನಡೆಸಲು ಸಾಧ್ಯವಾಗಲಿದೆ. ಜರ್ಮನಿಯಲ್ಲಿ ಈಗ ಭಾರತದ 28 ಸಾವಿರ ವಿದ್ಯಾರ್ಥಿಗಳು ಉನ್ನತ ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಸತ್ತವರ ಬಗ್ಗೆ ಮಾತನಾಡುವ ಬಿಜೆಪಿಗರಿಗೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ