ಬೆಂಗಳೂರು: ಜರ್ಬೆರಾ ಹೂ ಬೆಳೆಯೋದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕನಸೇ ಆಗಿತ್ತು. ಆದರೆ ಐಐಹೆಚ್ಆರ್ ಸತತ 8 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದು, ಜರ್ಬೆರಾದಲ್ಲಿ ಅರ್ಕಾರೆಡ್ ಮತ್ತು ಅರ್ಕಾ ಕೃಷಿಕ ತಳಿಗಳನ್ನು ಬಿಡುಗಡೆ ಮಾಡಿದೆ.
ಅಲಂಕಾರಕ್ಕೆ, ಮದುವೆ ಕಾರ್ಯಕ್ರಮಕ್ಕೆ, ಹಬ್ಬ ಹರಿದಿನಗಳಿಗೆ ಸಾಕಷ್ಟು ಬೇಡಿಕೆ ಇರುವ ಜರ್ಬೆರಾ ಹೂವನ್ನು ಕೇವಲ ಶ್ರೀಮಂತ ರೈತರು ಮಾತ್ರ ಬೆಳೆಯುತ್ತಿದ್ದರು. ಈ ಹೂವನ್ನು ಬೆಳೆಯಲು ಪಾಲಿಹೌಸ್ ನಿರ್ಮಾಣ ಮಾಡಬೇಕಿತ್ತು. ಕೀಟನಾಶಕ ಮತ್ತು ರಸಗೊಬ್ಬರಗಳ ನಿರ್ವಹಣೆಗೆ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಜರ್ಬೆರಾ ಹೂಗಳನ್ನು ಬೆಳೆಯುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) 8 ವರ್ಷಗಳ ಸಂಶೋಧನೆಯ ಫಲವಾಗಿ ಪಾಲಿಹೌಸ್ ಇಲ್ಲದೇ ತೆರೆದ ಪ್ರದೇಶದಲ್ಲಿ ಬೆಳೆಯಬಹುದಾದ ಜರ್ಬೆರಾದ ಅರ್ಕಾ ರೆಡ್ ಮತ್ತು ಅರ್ಕಾ ಕೃಷಿಕ ತಳಿಗಳನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಹೈದರಾಬಾದ್ ಮತ್ತು ಭುವನೇಶ್ವರ್ದಲ್ಲಿ ಬೆಳೆಯಲಾಗುತ್ತಿದೆ.
1990 ರಲ್ಲಿ ಜರ್ಬೆರಾ ಹೂಗಳು ಭಾರತಕ್ಕೆ ಬಂದಿದ್ದು, ಪ್ರಮುಖವಾಗಿ ಹಾಲೆಂಡ್ನಿಂದ ಜರ್ಬೆರಾ ಗಿಡಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಭಾರತದಲ್ಲಿ 800 ಹೆಕ್ಟೇರ್ ಪ್ರದೇಶದ ಪಾಲಿಹೌಸ್ನಲ್ಲಿ ಒಟ್ಟು 30 ಬಗೆಯ ಜರ್ಬೆರಾ ತಳಿಗಳನ್ನು ಬೆಳೆಯಲಾಗುತ್ತಿದೆ. ವಿದೇಶದಿಂದ ಒಂದು ಜರ್ಬೆರಾ ಗಿಡವನ್ನು ಆಮದು ಮಾಡಿಕೊಳ್ಳಲು ಹೆಚ್ಚಿನ ಹಣ ಖರ್ಚಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ಭಾರತದಲ್ಲಿ ಹಸಿರು ಮನೆಯಲ್ಲಿ ಬೆಳಯಾಗುವ 4 ತಳಿಗಳಾದ ಅರ್ಕಾ ಅಶ್ವ, ಅರ್ಕಾ ನೇಸರ, ಅರ್ಕಾ ಪಿಂಕ್, ಅರ್ಕಾ ವೈಟ್ ಬಿಡುಗಡೆ ಮಾಡಲಾಗಿದೆ. ಇದರಿಂದ ಹೊರ ದೇಶಗಳಿಗೆ ಕೊಡಬೇಕಾದ ಹಣ ಉಳಿತಾಯವಾದಂತಾಗಿದೆ.
ಓದಿ: ಸತತ ಮೂರನೇ ದಿನವೂ ಇಂಧನ ದರ ಏರಿಕೆ: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಎಷ್ಟು?
ಈ ತಳಿಗಳನ್ನು 35 ರಿಂದ 40 ಡಿಗ್ರಿ ಉಷ್ಣಾಂಶದಲ್ಲಿ ಬೆಳೆಯಬಹುದು. ಹಸಿರು ಮನೆಯಲ್ಲಿ ಬರುವಂತೆ ತೆರೆದ ಪ್ರದೇಶದಲ್ಲಿಯೂ ಒಂದು ಗಿಡದಲ್ಲಿ 40 ಹೂಗಳು, 1 ಸಾವಿರ ಚದರ ಮೀಟರ್ನಲ್ಲಿ 6 ಸಾವಿರ ಗಿಡ ಬರುತ್ತವೆ. 1 ವರ್ಷದಲ್ಲಿ 2 ಲಕ್ಷ ಹೂಗಳು ಬಿಡುತ್ತವೆ. ಒಂದು ಹೂವಿಗೆ 1 ರೂಪಾಯಿ ಬೆಲೆ ಸಿಕ್ಕರೂ 40 ರೂಪಾಯಿ ಸಿಗುತ್ತದೆ. ಒಂದು ಗಿಡ ಬೆಳೆಯುವ ಖರ್ಚು 6 ರಿಂದ 8 ರೂಪಾಯಿ ತಗುಲುತ್ತದೆ. ಒಂದು ಗಿಡದಲ್ಲಿ 10 ರಿಂದ 12 ಗಿಡಗಳು ಸಿಗುತ್ತವೆ. ಇದರಿಂದ ಗಿಡಗಳನ್ನ ಮತ್ತೆ ಖರೀದಿ ಮಾಡುವ ಹೊರೆ ಇಲ್ಲ ಎಂದು ವಿಜ್ಞಾನಿ ಮಾಹಿತಿ ನೀಡಿದರು.