ಬೆಂಗಳೂರು : ಮಹಾರಾಷ್ಟ್ರ ಸರ್ಕಾರ ಪ್ಯಾಕೇಜ್ ಕೊಟ್ಟಿದ್ದಾರಾ?. ರಾಜಸ್ಥಾನ ಸರ್ಕಾರ ಪ್ಯಾಕೇಜ್ ಕೊಟ್ಟಿದೆಯಾ? ಡಿಕೆಶಿಯವರ ಬಳಿ ಸಾಕಷ್ಟಿದೆ, ಅವರು ಪ್ಯಾಕೇಜ್ ಕೊಡಲಿ. ಇಡೀ ಜಗತ್ತಿನಲ್ಲಿ ಯಾರಾದ್ರು ಕೂಲಿ ಕಾರ್ಮಿಕರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ರೆ ಅದು ಯಡಿಯೂರಪ್ಪ ಸರ್ಕಾರ ಮಾತ್ರ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ತುಂಬಾ ಬ್ಯುಸಿಯಾಗಿದ್ದಾರೆ. ಆದರೆ, ಅವರಿಗೆ ಏನೂ ಕೆಲಸ ಇಲ್ಲ. ಅದರಲ್ಲೂ ಡಿಕೆಶಿ ಮತ್ತು ಸಿದ್ದರಾಮಯ್ಯ ಫುಲ್ ಬ್ಯುಸಿ ಆಗಿದ್ದಾರೆ. ಸರ್ಕಾರವನ್ನು ಬಯ್ಯೋದು ಮಾತ್ರ ಅವರ ಕೆಲಸ ಅಷ್ಟೇ ಎಂದಿದ್ದಾರೆ.
ಸರ್ಕಾರ ಏನೇ ಮಾಡಿದರೂ ವಿರೋಧ ಮಾಡುವುದೊಂದೇ ಅವರು ಮಾಡುವ ಕೆಲಸವಾಗಿದೆ. ಬೆಳಗ್ಗೆ ಎದ್ದ ತಕ್ಷಣ ಅವರಿಗೆ ಬಿಎಸ್ವೈ, ಸರ್ಕಾರದ ಮೇಲೆ ಆರೋಪ ಮಾಡುವುದು ಅವರ ಕೆಲಸವಾಗಿದೆ. ಅವರು ಬಯ್ಯೋದಿದ್ದರೆ ಅವರು ಚೈನಾಗೆ ಬಯ್ಯಬೇಕು. ಅವರೇ ಇದಕ್ಕೆ ಕಾರಣವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜಗತ್ತಿನಲ್ಲಿ ಎಲ್ಲಾ ಸರ್ಕಾರಗಳು ಕೋವಿಡ್ ನಿರ್ವಹಿಸುವಲ್ಲಿ ವಿಫಲವಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಈ ಸಂಬಂಧ ಎಲ್ಲಾ ಪ್ರಯತ್ನ ಮಾಡುತ್ತಿವೆ ಎಂದರು.
ಸಿಎಂ ಮನೆ ಮುಂದೆ ಕೋವಿಡ್ ಸೋಂಕಿತರು ಬರುವುದು ತಪ್ಪಲ್ಲ
ಸಿಎಂ ಮನೆ ಮುಂದೆ ಕೋವಿಡ್ ಸೋಂಕಿತರು ಬರುವುದು ತಪ್ಪಲ್ಲ. ಆದರೆ, ಅದಕ್ಕಾಗಿ ವ್ಯವಸ್ಥೆಯನ್ನು ರೂಪಿಸಲಾಗಿದೆ. ಪರಿಸ್ಥಿತಿ ಕೆಟ್ಟು ಹೋಗಲು ಕಾರಣ ಆಕ್ಸಿಜನ್ ಕೊರತೆ.
ಆಕ್ಸಿಜನ್ ಸಿಕ್ಕರೆ ಸಮಸ್ಯೆ ಸುಧಾರಣೆ ಆಗುತ್ತದೆ. ಮಹಾರಾಷ್ಟ್ರ ಸರ್ಕಾರಕ್ಕೂ ಈ ಸಮಸ್ಯೆ ಆಗಿಲ್ಲವೇ? ಕೇಜ್ರಿವಾಲ್ ಸರ್ಕಾರಕ್ಕೆ ಈ ಸಮಸ್ಯೆ ಆಗಿಲ್ವಾ? ಎಂದು ಪ್ರಶ್ನಿಸಿದರು.
ಪೂರ್ಣ ಲಾಕ್ಡೌನ್ ಯಶಸ್ವಿ ಮಾಡುವ ಸಂಬಂಧ ನಾವು 30 ಜಿಲ್ಲೆಗಳಲ್ಲಿ ಆನ್ಲೈನ್ ಮೂಲಕ ಚರ್ಚೆ ಮಾಡುತ್ತೇವೆ. ಒಂದು ಕುಟುಂಬದಲ್ಲಿ ಎಲ್ಲರಿಗೂ ಕೋವಿಡ್ ಬಂದಿರುತ್ತದೆ. ಅಂತವರಿಗೆ ಪಕ್ಷದ ಕಾರ್ಯಕರ್ತರು ಆಹಾರ ನೀಡುತ್ತೇವೆ.
ಬಹಳ ಶಿಸ್ತು ಬದ್ದವಾಗಿ ವ್ಯಾಕ್ಸಿನೇಶನ್ ನೀಡುವ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಕಾಂಗ್ರೆಸ್ ನವರಿಗೆ ಟೀಕೆ ಮಾಡುವುದೇ ಕೆಲಸ. ಅವರು ಏನೂ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.