ಬೆಂಗಳೂರು: ಪುನೀತ್ ಅವರ 1ನೇ ವರ್ಷದ ಪುಣ್ಯ ಸ್ಮರಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಕುಟುಂಬಸ್ಥರಿಂದ ಪೂಜೆ ನಡೆಯಲಿದೆ. ಲಕ್ಷಾಂತರ ಜನರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಇವತ್ತು ಗಂಧದಗುಡಿ ರಿಲೀಸ್ ಆಗಿದ್ದು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಧುಕೋಕಿಲ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಗೀತ ನಮನ ಕಾರ್ಯಕ್ರಮ: ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12ರ ತನಕ ನಡೆಯಲಿರುವ ಗೀತ ನಮನ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಸಾಧುಕೋಕಿಲ, ವಿಜಯ್ ಪ್ರಕಾಶ್, ಗುರುಕಿರಣ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಗಾಯಕರು ಹಾಡಲಿದ್ದಾರೆ. ಇನ್ನೊಂದೆಡೆ, ವಿಶ್ವದಾಖಲೆ ಬರೆಯಲು ಸಿದ್ಧವಾಗಿರುವ ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಮುಂಭಾಗದಲ್ಲಿ 75 ಕಟೌಟ್ ಹಾಕಿಸಿದ್ದಾರೆ. ಒಂದು ಕಿಲೋಮೀಟರ್ ತನಕ ಲೈಟಿಂಗ್ ವ್ಯವಸ್ಥೆಯಾಗಿದೆ.
ಸುಮಾರು 100 ಗಾಯಕರಿಂದ ಕಾರ್ಯಕ್ರಮ: ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲಾ ಮಾತನಾಡಿ, ಅಪ್ಪುಗೆ 24 ಗಂಟೆಗಳ ಗೀತ ನಮನ ಕಾರ್ಯಕ್ರಮ ಏರ್ಪಾಡಾಗಿದೆ. ಕನ್ನಡ ಫಿಲ್ಮ್ ಮೂಜಿಷಿಯನ್ಸ್ ಅಸೋಸಿಯೇಷನ್ ವತಿಯಿಂದ ನಮನ ಸಲ್ಲಿಸಲಾಗುತ್ತದೆ. ಸಿನಿ ಕಲಾವಿದರು ಸೇರಿ ಗಾಯಕರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಅಜಯ್ ವಾರಿಯರ್, ಶ್ರೀ ಹರ್ಷ, ಹರಿ ಕೃಷ್ಣ, ರವಿ ಶಂಕರ್ ಗೌಡ ಸೇರಿ 100 ಗಾಯಕರ ಉಪಸ್ಥಿತಿ ಇರಲಿದೆ. ಡಾ.ರಾಜ್‌ಕುಮಾರ್, ಅಪ್ಪು ಹಾಡುಗಳು ಹಾಗೂ ಭಾವ ಗೀತೆಗಳನ್ನು ಹಾಡಲಾಗುತ್ತದೆ ಎಂದು ಹೇಳಿದರು.
ಪುನೀತ್ ಸಮಾಧಿಗೆ ಭೇಟಿ ನೀಡಿದ ಮಾಲಾಶ್ರೀ: ನಟಿ ಮಾಲಾಶ್ರೀ ಪುನೀತ್ ಸಮಾಧಿಗೆ ಭೇಟಿ ನೀಡಿ ಮಾತನಾಡಿ, ಅಪ್ಪು ಅವರ ಗಂಧದಗುಡಿ ಸಿನಿಮಾ ದೊಡ್ಡ ಸಕ್ಸಸ್ ಕಂಡಿದೆ. ಎಲ್ಲರೂ ಸಿನಿಮಾ ನೋಡಬೇಕು. ನನಗಂತೂ ಅಪ್ಪು ಇಲ್ಲ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಸದಾ ನಮ್ಮ ಜೊತೆ ಇರುತ್ತಾರೆ ಎಂದು ಹೇಳಿದರು.
ಕಲಬುರಗಿಯಿಂದ ಬಂದ ವಿಶೇಷಚೇತನ ವ್ಯಕ್ತಿ: ಅಪ್ಪು ಸಮಾಧಿ ನೋಡಲು ಕಲಬುರಗಿಯಿಂದ ವಿಶೇಷಚೇತನ ದೇವರಾಜ್ ಆಗಮಿಸಿದ್ದರು. ವೀಲ್ ಚೇರ್ನಲ್ಲಿ ಅವರನ್ನು ತಾಯಿ ಕರೆತಂದಿದ್ದರು. ಅಪ್ಪು ಆಶಯದಂತೆ ಮಗನೂ ಸಮಾಜಕ್ಕೆ ಒಳಿತು ಮಾಡುವ ಆಸೆಯನ್ನು ಆಕೆ ವ್ಯಕ್ತಪಡಿಸಿದರು. ನೇತ್ರ, ದೇಹ ದಾನ ಮಾಡಲು ದೇವರಾಜ್ ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಮರಣೋತ್ತರ ಕರ್ನಾಟಕ ರತ್ನ ಪಡೆಯಲಿರುವ ಮೊದಲ ವ್ಯಕ್ತಿ ಪುನೀತ್: ರಾಜ್ಯೋತ್ಸವದಂದು ಪ್ರದಾನ
ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ: ಕಂಠೀರವ ಸ್ಟುಡಿಯೋಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುಣ್ಯ ಸ್ಮರಣೆಗೆ ನಾಳೆ ದರ್ಶನಕ್ಕೆ ಅಪ್ಪು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ. ಹೀಗಾಗಿ ಕಂಠೀರವ ಸ್ಟುಡಿಯೋ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದರು.