ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 36 ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಪೈಕಿ 5 ರಸ್ತೆಗಳನ್ನು ಸಿಎಂ ಲೋಕಾರ್ಪಣೆ ಮಾಡಿದ್ದಾರೆ ಎಂದು ಬಿಬಿಎಂಪಿ ಆಡಳಿತಗಾರ ಗೌರವ್ ಗುಪ್ತಾ ಹೇಳಿದ್ದಾರೆ.
ಕಾಮಗಾರಿಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇನ್ನೂ 9 ರಸ್ತೆಗಳ ಲೋಕಾರ್ಪಣೆ ಮಾಡಲಾಗುವುದು. ರಾಜಭವನ ರಸ್ತೆ ಮಾರ್ಗದ ಒಂದು ಭಾಗದಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿದ್ದು, ಬೀದಿ ದೀಪ ಅಳವಡಿಕೆ, ಸಸಿ ನೆಡುವುದು ಹಾಗೂ ಸೈಕಲ್ ಟ್ರ್ಯಾಕ್‌ಗೆ ಬಣ್ಣ ಬಳಿಯುವ ಕಾಮಗಾರಿ ಮಾತ್ರ ಬಾಕಿಯಿದೆ.
ಪಾದಚಾರಿ ಕೆಳಸೇತುವೆಯನ್ನು ಪರಿಶೀಲಿಸಿ ಯಾರು ಅದನ್ನು ಬಳಕೆ ಮಾಡದೇ ಇರುವ ಪರಿಣಾಮ ಅದನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಂಟೋನ್ಮೆಂಟ್ ರಸ್ತೆ ಹಾಗೂ ಕ್ವೀನ್ಸ್ ರಸ್ತೆ ತಪಾಸಣೆ ನಡೆಸಿ, ಪಾದಚಾರಿ ಮಾರ್ಗದಲ್ಲಿ ಆರ್.ಸಿ.ಸಿ ವಿದ್ಯುತ್ ಕಂಬಗಳಿರುವುದನ್ನು ಕಂಡು, ಸ್ಥಳದಲ್ಲಿಯೇ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ಪಾದಚಾರಿ ಮಾರ್ಗಗಳಲ್ಲಿರುವ ಆರ್.ಸಿ.ಸಿ ವಿದ್ಯುತ್ ಕಂಬಳನ್ನು ತೆರವುಗೊಳಿಸಲು ಸೂಚಿಸಿದರು.