ಬೆಂಗಳೂರು: ಸ್ಯಾಂಡಲ್ವುಡ್ ನಟ ಸುದೀಪ್ ಅವರನ್ನು ಟೀಕಿಸುವ ಮೂಲಕ ರಾಜ್ಯದ ಕನ್ನಡಿಗರಿಗೆ ಕಾಂಗ್ರೆಸ್, ಜೆಡಿಎಸ್ ಅಪಮಾನ ಮಾಡಿದೆ. ಕೈ, ದಳ ನಾಯಕರದ್ದು ರೋಗಗ್ರಸ್ಥ ಮನಸ್ಥಿತಿ. ಕಿಚ್ಚ ಸುದೀಪ್ ಕನ್ನಡದ ಹೆಮ್ಮೆಯ ನಟ. ಬಿಜೆಪಿ ಬೆಂಬಲಿಸುವ ಮೂಲಕ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ. ಎಸ್ ಟಿ ಸಮುದಾಯದ ನಟ ಸುದೀಪ್ ಬೆಂಬಲದಿಂದ ಪಕ್ಷಕ್ಕೆ ಬಲ ಬಂದಿದೆ. ಆದರೆ, ಈ ಕಾಂಗ್ರೆಸ್ ಮತ್ತು ಜೆಡಿಎಸ್ ನವರಿಗೆ ಏನಾಗಿದೆ ?. ಲೋಕತಂತ್ರ ವ್ಯವಸ್ಥೆಯಲ್ಲಿ ಅವರು ಯಾವುದೇ ಪಕ್ಷಕ್ಕೆ ಬೆಂಬಲ ಕೊಡುವ ಹಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಾಗ್ದಾಳಿ ನಡೆಸಿದರು.
ಮಲ್ಲೇಶ್ವರಂ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಿಚ್ಚ ಸುದೀಪ್ ಬೆಂಬಲ ಘೋಷಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಟೀಕಿಸ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಸೋಲುವ ಭಯ ಶುರುವಾಗಿದೆ. ಹಾಗಾಗಿ, ಸುದೀಪ್ ವಿರುದ್ಧ ಟೀಕೆ ಮಾಡ್ತಿದ್ದಾರೆ. ತನಿಖಾ ಸಂಸ್ಥೆಗಳ ಭಯದಿಂದ ಸುದೀಪ್ ಬೆಂಬಲ ಅಂತ ಕಾಂಗ್ರೆಸ್ ಟೀಕಿಸಿರೋದು ಸರಿಯಲ್ಲ. ಕಾಂಗ್ರೆಸ್‌ಗೆ ಯಾರಾದ್ರೂ ಬೆಂಬಲ ಕೊಟ್ಟರೆ ಆಗ ಅವರಿಗೂ ತನಿಖಾ ಸಂಸ್ಥೆಗಳ ಭಯ ಇದೆ ಅಂತ ಅರ್ಥನಾ?. ಸ್ವರ ಭಾಸ್ಕರ್ ಅವರು ರಾಹುಲ್ ಗಾಂಧಿಯವರ ಭಾರತ್ ಯಾತ್ರೆಗೆ ಬಹಿರಂಗ ಘೋಷಣೆ ಮಾಡಿದ್ರು. ಕಾಂಗ್ರೆಸ್, ಜೆಡಿಎಸ್ ನವರದ್ದು ರೋಗಗ್ರಸ್ಥ ಮನಸ್ಥಿತಿ. ಅವರಿಗೆ ಯಾವುದು ಸರಿಯೋ ಅದಷ್ಟೇ ಸರೀನಾ?. ಸುದೀಪ್ ಅವರಿಗೆ ತಮ್ಮದೇ ಆದ ಅಸ್ಮಿತೆ, ಖ್ಯಾತಿ, ಪ್ರತಿಭೆ ಇದೆ. ಅವರ ಕುರಿತ ಹೀಗೆ ಟೀಕೆ ಮಾಡುವುದನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಇದನ್ನೂ ಓದಿ : ಸುದೀಪ್ ಕರ್ನಾಟಕದ ಜನರ ಜೊತೆ ನಿಲ್ಲಬೇಕು, ಪಕ್ಷದ ಪರವಾಗಿ ಅಲ್ಲ: ಪ್ರಿಯಾಂಕ್ ಖರ್ಗೆ
ಭ್ರಷ್ಟಾಚಾರದ ಗ್ಯಾರಂಟಿ : ಕಾಂಗ್ರೆಸ್ನ ಗ್ಯಾರಂಟಿ ಅಂದ್ರೆ ಭ್ರಷ್ಟಾಚಾರದ ಗ್ಯಾರಂಟಿ. ದ್ರಾಕ್ಷಿ ಸಿಕ್ಲಿಲ್ಲ ಎಂದರೆ ಅದು ಹುಳಿ ಅಂತಲ್ಲ. ಸುದೀಪ್ ಬೆಂಬಲ ಸಿಗದ ಕಾಂಗ್ರೆಸ್, ಜೆಡಿಎಸ್ ನವರದ್ದು ಇದೇ ಮನಸ್ಥಿತಿ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸುದೀಪ್ ಅವರನ್ನು ಟಾರ್ಗೆಟ್ ಮಾಡಿವೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : 'ಸುದೀಪ್ ಇದೇ ಬೆಂಬಲವನ್ನು ಕಾಂಗ್ರೆಸ್‌ಗೆ ಕೊಟ್ಟಿದ್ದರೆ ವಿರೋಧ ಮಾಡುತ್ತಿದ್ದರೇ?'
ಇನ್ನು ರಾಹುಲ್ ಗಾಂಧಿಯವರ ಕೋಲಾರ ಸತ್ಯಮೇವ ಜಯತೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ. ಅದಕ್ಕೆ ಅದರ ಸಿದ್ಧಾಂತವೇ ಗೊತ್ತಿಲ್ಲ, ನಾಯಕರು ಯಾರು ಅಂತ ಗೊತ್ತಿಲ್ಲ. ರಾಹುಲ್ ಗಾಂಧಿ ಕೋಲಾರಕ್ಕೆ ಬಂದರೆ ಯಾವ ಪರಿಣಾಮವೂ ಆಗಲ್ಲ ಎಂದರು.
ಇದನ್ನೂ ಓದಿ : ಸುದೀಪ್ ಸಿಎಂ ಮಾಡ್ತೇವಿ ಅಂತಾ ಹೇಳಿ ಮತ ಪಡೆದರೂ ಆಶ್ಚರ್ಯವೇನಿಲ್ಲ: ಸತೀಶ್ ಜಾರಕಿಹೊಳಿ
ಸುದೀಪ್ ಹೇಳಿದ್ದೇನು? : ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಸುದೀಪ್ ಅವರು ನಾನು ಬಿಜೆಪಿ ಸೇರುತ್ತಿಲ್ಲ, ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುತ್ತಿಲ್ಲ. ಕಷ್ಟದಲ್ಲಿ ನನ್ನ ಪರವಾಗಿ ನಿಂತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಿಲ್ಲುತ್ತಿದ್ದೇನೆ. ವೈಯಕ್ತಿಕವಾಗಿ ಬೊಮ್ಮಾಯಿ ಬೆಂಬಲಕ್ಕೆ ನಿಂತಿದ್ದೇನೆ. ಇದು ರಾಜಕೀಯಕ್ಕಲ್ಲ. ಅವರು ಸೂಚಿಸುವವರ ಪರವಾಗಿ ಮಾತ್ರ ಪ್ರಚಾರ ನಡೆಸುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.