ಬೆಂಗಳೂರು: ಚುನಾವಣೆಗೂ ಮೊದಲು ಧಾರ್ಮಿಕ ಸಂಘರ್ಷ ನಡೆಸಲು ಬಜರಂಗದಳವನ್ನ ನಿಷೇಧಿತ ಸಂಘಟನೆ ಜೊತೆ ಹೋಲಿಕೆ ಮಾಡಿದ್ದೀರಿ. ಭಗವಂತ ಹನುಮಂತ ನಮ್ಮ ಜೇಬಿನಲ್ಲಿ ಅಲ್ಲ, ನಮ್ಮ ಹೃದಯದಲ್ಲಿ ಇದ್ದಾನೆ. ನೀವು ಬಜರಂಗದಳ ನಿಷೇಧ ಮಾಡುತ್ತೇವೆ ಅಂತ ಹೇಳಬಹುದು. ಆದರೆ ಯಾವತ್ತೂ ನಮ್ಮ ಮನಸ್ಸಿಂದ ತೆಗೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ ಸಾಧ್ಯ. 25 ವರ್ಷಗಳಲ್ಲಿ ಕರ್ನಾಟಕವನ್ನ ಹೇಗೆ ಅಭಿವೃದ್ಧಿಯತ್ತ ಕೊಂಡೊಯ್ಯಬಹುದು ಅನ್ನೋ ರೂಟ್ ಮ್ಯಾಪ್ ಹಾಕಿಕೊಳ್ಳಲಾಗಿದೆ. ಆದರೆ, ಕಾಂಗ್ರೆಸ್ ಬಜರಂಗದಳ ಬ್ಯಾನ್ ಮಾಡೋದಾಗಿ ಹೇಳಿದೆ. ಈ ಮೂಲಕ ಕರ್ನಾಟಕ ಜನತೆಗೆ ಅವಮಾನ ಮಾಡಲಾಗಿದೆ. ಸ್ವತಃ ಹನುಮಾನ್ಗೆ ಅಪಮಾನ ಮಾಡಿದ್ದಾರೆ. ಪಿಎಫ್‌ಐ ಮತ್ತು ಬಜರಂಗದಳ ಎರಡನ್ನೂ ಬ್ಯಾನ್ ಮಾಡೋದಾಗಿ ಹೇಳಿದೆ ಎಂದರು.
ಪಿಎಫ್‌ಐ ಜೊತೆಗೆ ಬಜರಂಗದಳ ಹೋಲಿಕೆ ಮಾಡಿದ್ದಾರೆ. ಹಿಂದೂಗಳ ಸಂಘಟನೆಯನ್ನ ಇಸ್ಲಾಂ ಭಯೋತ್ಪಾದಕ ಸಂಘಟನೆಯ ಜೊತೆ ಹೋಲಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಏನು ಸಂದೇಶ ನೀಡಲು ಹೊರಟಿದ್ದಾರೆ. ಪಿಎಫ್‌ಐ ಮೇಲಿನ ಕೇಸ್ ವಾಪಸ್ ಪಡೆಯುವ ಮೂಲಕ, ಭಯೋತ್ಪಾದಕ ಸಂಘಟನೆಗಳ ಜೊತೆ ಕೈ ಕುಲುಕಿದ್ದಾರೆ. ಭಗವಂತ ರಾಮ ಕಾಲ್ಪನಿಕಾನಾ?. ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರನ್ನ ರಿಮೋಟ್ ರೀತಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಅವರು ಹೇಳಿದಂತೆ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಿದ್ದಾರೆ. ಬಜರಂಗದಳವನ್ನ ಕರ್ನಾಟಕದಲ್ಲಿ ಮಾತ್ರ ಯಾಕೆ ಬ್ಯಾನ್ ಮಾಡುತ್ತೀರಿ. ನಿಮಗೆ ತಾಕತ್ ಇದ್ದರೆ ಹಿಮಾಚಲ ಪ್ರದೇಶ, ರಾಜಸ್ಥಾನದಲ್ಲಿ ಬ್ಯಾನ್ ಮಾಡಿ ತೋರಿಸಿ ಎಂದು ಸವಾಲೆಸೆದರು.
ಕಾಂಗ್ರೆಸ್ ಭರವಸೆ ಸುಳ್ಳಿನ ಕಂತೆ- ತೇಜಸ್ವಿ ಸೂರ್ಯ: ನಂತರ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕಾಂಗ್ರೆಸ್ ನಿನ್ನೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ ಹಾಗಾಗಿ ನಾವು ಮಾಡೋಣ ಅಂತ ಹೇಳಿ ಕೆಲವು ಹುಡುಗರನ್ನ ಕೇಳಿ ಬರೆಸಿದಂತಿದೆ. ಐದು ಪ್ರಮುಖ ಅಂಶ, ಸುಳ್ಳು ಮತ್ತು ವಿಪರ್ಯಾಸದಿಂದ ಕೂಡಿದೆ ಎಂದ ವ್ಯಂಗ್ಯವಾಡಿದರು. ಕಾಂಗ್ರೆಸ್ ಪ್ರಣಾಳಿಕೆ ಲೋಕಾಯುಕ್ತಕ್ಕೆ ಮತ್ತಷ್ಟು ಶಕ್ತಿ ತುಂಬಲಿದ್ದೇವೆ ಅಂತಿದೆ. ಸಿದ್ದರಾಮಯ್ಯ ಲೋಕಾಯುಕ್ತ ಬರ್ಕಾಸ್ ಮಾಡಿ, ಎಸಿಬಿ ರಚನೆ ಮಾಡಿದ್ದರು ಎಂದು ಹೇಳಿದರು.
ಎಸಿಬಿ ಛೇರ್ಮನ್ ಸಿಎಂ ಆಗಿದ್ದರು, ತಮಗೆ ಬೇಕಾದಂತೆ ಬಳಸಿಕೊಂಡರು. ಕಾಂಗ್ರೆಸ್ ಈಗ ಲೋಕಾಯುಕ್ತಕ್ಕೆ ಶಕ್ತಿ ತುಂಬೋದಾಗಿ ಹೇಳಿದೆ. ಮಹದಾಯಿ ಯೋಜನೆ ಕಂಪ್ಲೀಟ್ ಮಾಡೋದಾಗಿ ಹೇಳಿದೆ. ಸೋನಿಯಾ ಗಾಂಧಿ ಮಹದಾಯಿಯಿಂದ ಒಂದು ಹನಿ ನೀರು ನೀಡಲ್ಲ ಅಂತ ಹೇಳಿದ್ದರು. ಬಿಜೆಪಿ ಈಗಾಗಲೇ ಒಂದು ಸಾವಿರ ಕೋಟಿ ಮೀಸಲಿಟ್ಟಿದೆ. ಕಾಂಗ್ರೆಸ್ ನೋಡಿದರೆ ನಾವು ಕಂಪ್ಲೀಟ್ ಮಾಡುತ್ತೇವೆ ಅಂತ ಹೇಳಿದೆ. ಕಾಂಗ್ರೆಸ್ ಬರೀ ಸುಳ್ಳು ಭರವಸೆ ನೀಡಿದೆ ಎಂದು ಟೀಕಿಸಿದರು.
ಯಶಸ್ವಿನಿ ಸ್ಕೀಮ್ ಬರ್ಕಾಸ್ ಮಾಡಿದರು, ಈಗ ವಾಪಸ್ ತರ್ತೀವಿ ಅಂತ ಹೇಳಿದ್ದಾರೆ. ಮಂಡ್ಯದ ಮೈ ಶುಗರ್ ಬಂದ್ ಮಾಡಿದ್ದರು, ಬ್ರಹ್ಮಾವರ ಶುಗರ್ ಆರಂಭ ಮಾಡುತ್ತೇವೆ ಅಂತ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆ ನಿಲ್ಲಿಸೋದಾಗಿ ಹೇಳಿದ್ದಾರೆ. ಡಿಕೆಶಿ ಅವರೇ ಇಲ್ಲೀಗಲ್ ಮೈನಿಂಗ್ ಮಾಡಿ ಕೇಸ್ ದಾಖಲಾಗಿದೆ. ಹನುಮಗಿರಿಯಲ್ಲಿ ರೋಪ್ ವೇ ಮಾಡುವ ನಿರ್ಧಾರ ಮಾಡಿದೆ. ಹನುಮ ಅಂದೇ ಹುಟ್ಟಿದ್ನಾ, ಅಲ್ಲೇ ಹುಟ್ಟಿದ್ನಾ ಅಂತ ಸಿದ್ದರಾಮಯ್ಯ ಕೇಳಿದ್ದರು. ಇವರು ಹಳೆಯ ದೇವಾಲಯಗಳ ಅಭಿವೃದ್ಧಿ ಮಾಡ್ತಾರಾ? ಎಂದು ಪ್ರಶ್ನಿಸಿದರು.
ಉಚಿತ ಬಸ್ ಪಾಸ್ ನಿಡೋದಾಗಿ ಹೇಳಿದ್ದಾರೆ, ಆದರೆ ವಿದ್ಯಾನಿಧಿ ಯೋಜನೆಯಡಿ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆಯನ್ನು ಏನೋ ಬರೆದು ಹಾಕಿದ್ದಾರೆ ಅಷ್ಟೆ, ಜನ ಹೇಗಿದ್ದರೂ ನೋಡಲ್ಲ ಅನ್ನೋ ನಂಬಿಕೆ ಅವರದ್ದು ಎಂದರು. ಕಾಂಗ್ರೆಸ್ ಪ್ರಣಾಳಿಕೆ ಕನ್ನಡ ವಿರೋಧಿಯಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ತೆಗೆದು ಹಾಕುತ್ತೇವೆ ಎಂದಿದ್ದಾರೆ ಎನ್ಇಪಿ ಮೂಲ ಉದ್ದೇಶ ಮಾತ್ರ ಭಾಷೆಯಲ್ಲಿ ಶಿಕ್ಷಣ ಸಿಗುವುದಾಗಿದೆ. ಉನ್ನತ ಶಿಕ್ಷಣವನ್ನು ಕೂಡ ಕನ್ನಡದಲ್ಲಿ ಮಾಡಲು ಎನ್ಇಪಿಲಿ ಅವಕಾಶ ನೀಡಲಾಗಿದೆ. ಈಗ ಇವರು ಎನ್ಇಪಿ ರದ್ದು ಮಾಡುತ್ತೇವೆ ಎಂದಿದ್ದಾರೆ, ಇವರು ಮಾತೃ ಭಾಷೆಯ ಶಿಕ್ಷಣ ವಿರೋಧ ಮಾಡ್ತಾ ಇದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ದು ಹಿಂದೂ ವಿರೋಧಿ ಪ್ರಣಾಳಿಕೆ ಬಜರಂಗದಳ ಬ್ಯಾನ್ ಮಾಡ್ತೇವೆ ಎಂದಿದ್ದಾರೆ. ಇದು ಹನುಮ ಭಕ್ತರಿಗೆ ಮಾಡಿದೆ ಅವಮಾನ ಹಿಂದುಗಳನ್ನು ಟೆರರ್ ಎಂದು ಹೇಳೋಕೆ ಕಾಂಗ್ರೆಸ್ ಹೊರಟಿದೆ, ಇದರ ಜೊತೆ ಗೋಹತ್ಯೆ ನಿಷೇದ ಕಾಯ್ದೆ, ಮತಾಂತರ ನಿಷೇದ ಕಾಯ್ದೆಯನ್ನು ರದ್ದು ಮಾಡ್ತೇವೆ ಎಂದಿದ್ದಾರೆ. ಅಪ್ಪಿ ತಪ್ಪಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೂಂಡಾರಾಜ್ಯ ಬರಲಿದೆ ಭ್ರಷ್ಟಾಚಾರ ತಾಂಡವ ಆಡಲಿದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಿಂದುಗಳ ಕಗ್ಗೊಲೆ ಆಗಿತ್ತು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಬಿಜೆಪಿಗೆ ಮತ ಹಾಕುವುದರಿಂದ ಕರ್ನಾಟಕ ಸುರಕ್ಷಿತ: ಅಮಿತ್ ಶಾ