ಬೆಂಗಳೂರು: ತಮ್ಮ ಮಾಲೀಕತ್ವದ ಬಸ್‌ನಲ್ಲಿ ಮಾದಕ ವಸ್ತುಗಳ ಸಾಗಾಟ ಮಾಡಿರುವ ಆರೋಪದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರ ಪತ್ನಿ ಮಂಜುಳಾ ಅಭಯ್‌ಚಂದ್ರ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಅಲ್ಲದೆ, ಪ್ರಕರಣಕ್ಕೂ ಅರ್ಜಿದಾರರಿಗೂ ಸಂಬಂಧವಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಬಲವಾದ ಸಾಕ್ಷ್ಯಾಧಾರಗಳು ಇಲ್ಲ. ಈ ನಿಟ್ಟಿನಲ್ಲಿ ಪ್ರಕರಣದಲ್ಲಿ ಅರ್ಜಿದಾರರಾದ ಮಂಜುಳಾ ವಿಚಾರಣೆ ಎದುರಿಸಬೇಕಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ತಮ್ಮ ವಿರುದ್ಧ ಉತ್ತರಕನ್ನಡ ಜಿಲ್ಲೆಯ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಗೊಳಿಸುವಂತೆ ಕೋರಿ ಮಂಜುಳಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಧಾರವಾಡ ಪೀಠದ ನ್ಯಾ.ಜೆ.ಎಂ. ಖಾಝಿ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿದೆ. ಅಲ್ಲದೆ, ಅರ್ಜಿಯನ್ನು ವಜಾಗೊಳಿಸಿದ್ದು, ಪ್ರಕರಣ ಸಂಬಂಧ ವಿಚಾರಣೆ ಎದುರಿಸುವಂತೆ ಸೂಚನೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಸ್‌ನ ಮಾಲೀಕತ್ವ ಅರ್ಜಿದಾರರ ಹೆಸರಿನಲ್ಲಿದ್ದರೂ, ಬಸ್‌ನ ನಿರ್ವಹಣೆಗೆ ಗುತ್ತಿಗೆ ರೂಪದಲ್ಲಿ ಗಣೇಶ್ ಟ್ರಾವೆಲ್ಸ್‌ಗೆ ನೀಡಲಾಗಿದೆ. ಅಕ್ರಮ ಮಾದಕ ವಸ್ತುಗಳ ಸಾಗಾಟಕ್ಕೂ ಮಾಲೀಕರಿಗೂ ಯಾವುದೇ ಸಂಬಂಧ ಇಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯಲ್ಲಿ ಅರ್ಜಿದಾರರ ವಿರುದ್ಧ ನಡೆಯುತ್ತಿರುವ ವಿಚಾರಣೆ ಮತ್ತು ಆರೋಪ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಪ್ರಕರಣ ಸಂಬಂಧ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಈ ಸಂದರ್ಭದಲ್ಲಿ ಬಸ್‌ನ್ನು ಗಣೇಶ್ ಟ್ರಾವೆಲ್ಸ್‌ಗೆ ನೀಡಿರುವುದು ಮತ್ತು ಈ ಕುರಿತು ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಯಾವುದೇ ದಾಖಲೆಗಳನ್ನು ನೀಡಿರಲಿಲ್ಲ ಎಂದು ವಾದಿಸಿದರು.
ಅಲ್ಲದೆ, ಬಸ್‌ನ್ನು ಗುತ್ತಿಗೆಗೆ ನೀಡಲಾಗಿದೆ ಎಂದು ತಿಳಿಸಿ ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆದರೆ, ಯಾವುದೇ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಿರಲಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ತಮ್ಮ ಮಾಲೀಕತ್ವದ ಬಸ್‌ನ್ನು ಗಣೇಶ್ ಟ್ರಾವೆಲ್ಸ್ ನಡುವೆ ಮಾಡಿಕೊಂಡಿರುವ ಒಪ್ಪಂದವನ್ನು ಬಹಿರಂಗಪಡಿಸುವುದಕ್ಕೆ ಇಚ್ಛಿಸುತ್ತಿಲ್ಲ. ಇದೇ ಕಾರಣದಿಂದ ವಿಚಾರಣೆಯನ್ನು ರದ್ದುಪಡಿಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಉತ್ತರ ಕನ್ನಡ ಜಿಲ್ಲೆಯ ಮಾಜಾಳಿ ಚೆಕ್ ಪೋಸ್ಟ್‌ನಲ್ಲಿ ಮಂಜುಳಾ ಮಾಲೀಕತ್ವದ ಬಸ್‌ನಲ್ಲಿ(ಬಸ್‌ನ ಸಂಖ್ಯೆ ಪಿವೈ-01/ಸಿಜಿ-9687)ನಲ್ಲಿ 2018ರ ಸೆ. 16ರಂದು 9.190 ಕೆಜಿ ಗಾಂಜಾ ಸಾಗಾಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಾಜಾಳಿ ಚೆಕ್ ಪೋಸ್ಟ್ನ ಅಬಕಾರಿ ಉಪನಿರೀಕ್ಷಕರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು.
ಅಲ್ಲದೆ, ಈ ಸಂಬಂಧ ವಿಚಾರಣೆ ನಡೆಸಿ ಆರೋಪ ಪಟ್ಟಿಯನ್ನು ಕಾರವಾರದ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ರದ್ದು ಕೋರಿ ಮಂಜುಳಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಎಟಿಎಂನಿಂದ ಹಣ ಬಾರದೇ 500 ಅಕೌಂಟ್ನಿಂದ ಕಟ್.. ವಕೀಲನಿಗೆ ಬಡ್ಡಿ ಸಮೇತ 1,02,700 ರೂ. ಪರಿಹಾರ ನೀಡಲು ಆದೇಶ