ಹೊಸಕೋಟೆ: ಗಣೇಶ ಮೂರ್ತಿಗಳನ್ನಿಡಲು ಸರ್ಕಾರ ನಾನಾ ರೀತಿಯ ನಿಯಮಗಳನ್ನು ವಿಧಿಸಿದ್ದು ಮೂರ್ತಿ ತಯಾರಕರು ಮತ್ತು ವ್ಯಾಪಾರಸ್ಥರು ನಷ್ಟ ಅನುಭವಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಒಂದೆಡೆ ಸರ್ಕಾರದ ರೂಲ್ಸ್ ಮತ್ತೊಂದು ಕಡೆ ಪೊಲೀಸರ ರೂಲ್ಸ್‌ಗೆ ಜನರು ಬೆಚ್ಚಿಬಿದ್ದಿದ್ದಾರೆ. ಹೀಗಾಗಿ, ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯ ಸಹವಾಸವೇ ಬೇಡ ಎಂದು ಸುಮ್ಮನಾಗಿದ್ದಾರೆ. ಇದರಿಂದಾಗಿ ಮೂರ್ತಿಗಳ ತಯಾರಕರು ಮತ್ತು ಮಾರಾಟಗಾರರು ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ.
ಸಾಮಾನ್ಯವಾಗಿ ಒಂದು ಗ್ರಾಮದಲ್ಲಿ ಕನಿಷ್ಠ ಐದಾರು ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆದರೆ, ಸರ್ಕಾರದ ನಾನಾ ನಿಯಮಗಳಿಗೆ ಮತ್ತು ಗೊಂದಲದ ಹೇಳಿಕೆಗಳಿಗೆ ಜನರು ಈ ವರ್ಷ ಗಣೇಶ ಪ್ರತಿಷ್ಠಾಪನೆ ಮಾಡುವ ಗೋಜಿಗೆ ಹೋಗಿಲ್ಲ.
ಸಂಜೆಯಾದರೂ ಮಾರಾಟವಾಗದ ಮೂರ್ತಿಗಳು: ತಾಲೂಕಿನಲ್ಲಿ ಅತಿ ಹೆಚ್ಚು ಗಣೇಶ ಮೂರ್ತಿಗಳು ಮಾರಾಟವಾಗುವುದು ಹೊಸಕೋಟೆ ನಗರದಲ್ಲಿ. ಆದರೆ, ಈ ಬಾರಿ ವ್ಯಾಪಾರಸ್ಥರಿಗೆ ಅಂದುಕೊಂಡಷ್ಟು ಮೂರ್ತಿಗಳು ಮಾರಾಟವಾಗದೇ ಸಂಜೆಯಾದರೂ ಗ್ರಾಹಕರ ಬರುವಿಕೆಯನ್ನು ಎದುರು ನೋಡುತ್ತಿದ್ದರು.
ದೊಡ್ಡ ಗಾತ್ರದ ಮೂರ್ತಿಗಳಿಗೆ ಬೇಡಿಕೆ ಹೆಚ್ಚು:
ಸರ್ಕಾರ ನಿಗದಿಪಡಿಸಿದ ನಾಲ್ಕು ಅಡಿ ಎತ್ತರದ ಮೂರ್ತಿಗಳನ್ನು ಪಡೆಯಲು ಜನ ಮುಗಿಬಿದ್ದರು. ಆದರೆ, ಸಣ್ಣ ಪ್ರಮಾಣದ ಒಂದೆರಡು ಅಡಿ ಎತ್ತರದ ಮೂರ್ತಿಗಳನ್ನು ಕೇಳುವವರೇ ಇರಲಿಲ್ಲ. ಎರಡು ಮೂರು ದಿನಗಳಿಂದ ವ್ಯಾಪಾರ ಮಾಡುತ್ತಿದ್ದವರು ಸಹ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ಕೊಳ್ಳಲು ಬರಲೇ ಇಲ್ಲ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜಿಲ್ಲಾಡಳಿತ ಹಾಗೂ ಸಮಿತಿ ನಡುವೆ ಹಗ್ಗಜಗ್ಗಾಟ : ಕೊನೆಗೂ ಗಣೇಶನನ್ನು ಪ್ರತಿಷ್ಠಾಪಿಸಿದ ಸಮಿತಿ