ಬೆಂಗಳೂರು : ಗಾಂಧಿಯವರು ದೇಶದ ಸಾಮಾನ್ಯ ರೈತರಿಗೂ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರೋಧಿ ಧೋರಣೆ ಅರ್ಥ ಮಾಡಿಸಿ, ಹೋರಾಟವನ್ನು ನಡೆಸಿದರು. ಆದರೆ, ಇಂದು ಅಂತಹ ಮುಖಂಡರ ಕೊರತೆ ಕಾಣುತ್ತಿದೆ ಎಂದು ಹೈ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದರು.

ಸೋಮವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಎ.ಅಣ್ಣಾಮಲೈ ಅವರ 'ಗಾಂಧಿ ದಿ ಲಾಯರ್' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಗಾಂಧಿಯವರ ಬಗ್ಗೆ ಪುಸ್ತಕ, ಸಿನಿಮಾ ಬಂದಿದೆ. ಆದರೆ, ಗಾಂಧೀಜಿಯವರ ಬಗ್ಗೆ ಇನ್ನೂ ಅನೇಕ ಸೂಕ್ಷ್ಮಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಆಗಬೇಕಿದೆ. ಈ ಕೃತಿ ಅಂತಹ ಕೆಲಸವನ್ನು ಮಾಡುತ್ತಿದೆ ಎಂದರು.
ಗಾಂಧಿಯವರ ಪ್ರತಿಯೊಂದು ಹೆಜ್ಜೆ, ಪ್ರತಿಯೊಂದು ಅನುಭವ ಇಂದಿಗೂ ಪ್ರಭಾವ ಬೀರುತ್ತದೆ. ಹೀಗಾಗಿ ಅವರ ವಿಚಾರಗಳು ಎಂದೆಂದಿಗೂ ಪ್ರಸ್ತುತವಾಗಿದೆ ಎಂದ ಅವರು, ಬ್ಯಾಂಕ್ ಮೊತ್ತ, ಆಸ್ತಿ, ಚಿನ್ನಾಭರಣ ಸೇರಿ ಇತರ ಕಾರಣಕ್ಕಾಗಿ ಮೊಕದ್ದಮೆ ಹೂಡಿ ಕೋರ್ಟ್ನಲ್ಲಿ ಹೋರಾಡಿದ್ದನ್ನು ನೋಡಿದ್ದೇನೆ. ಆದರೆ, ತಂದೆ ತಾಯಿ ಬಿಟ್ಟು ಹೋದ ಪುಸ್ತಕಗಳನ್ನು ತಮ್ಮದಾಗಿಸಿಕೊಳ್ಳಲು ಮೊಕದ್ದಮೆ ಹೂಡಲು ಮುಂದಾಗುವ ಕಾಲ ಬರಲಿ ಎಂದು ಆಶಿಸಿದರು.
ಮಹಾತ್ಮ ಗಾಂಧೀಜಿ ಅವರನ್ನು ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧದ ದೇಶ ಜಾಗೃತಿಯ ಲೇಖನಗಳಿಗೆ ಸೇಡಿಶನ್ ಕಾಯ್ದೆಯಡಿ ಸಾವಿರಾರು ದಿನಗಳ ಕಾಲ ಬಂಧಕ್ಕೊಳಪಡಿಸಲಾಗಿತ್ತು. ಆದರೆ, ಸ್ವಾತಂತ್ರ್ಯದ ನಂತರ ಈ ಕಾಯ್ದೆಯನ್ನು ತೆಗೆದು ಹಾಕಬೇಕಿತ್ತು. ಆದರೆ ನಮ್ಮ ಸರ್ಕಾರಗಳು ಮುಂದುವರೆಸಿಕೊಂಡು ಬಂದಿರುವುದು ದುರ್ದೈವದ ಸಂಗತಿ ಎಂದು ಅಭಿಪ್ರಾಯಪಟ್ಟರು.
ದೇಶ ದ್ರೋಹದ ಕಾನೂನೂನಿನ ಅಡಿ 2 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಂದೂ ಕೂಡ ಇದನ್ನು ವಿರೋಧಿಸಿದ್ದೆ. ಇಂದು ಈ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಇಂತಹ ಕಾನೂನುಗಳ ಬಗೆಗೆ ಮತ್ತೆ ಸಾರ್ವಜನಿಕ ಚರ್ಚೆ ಆರಂಭವಾಗಿದೆ. ಹೀಗಾಗಿ ಇಂತಹ ಬ್ರಿಟೀಷ್ ಕಾಲದ ಕಾನೂನುಗಳನ್ನು ತೆಗೆದು ಹಾಕಲು ಸಕಾಲವಾಗಿದೆ ಎಂದು ಹೇಳಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಮಾತನಾಡಿ, ಗಾಂಧಿ ಹೋರಾಟವನ್ನು ರಕ್ತ ರಹಿತ ಕ್ರಾಂತಿ ಎಂದು ಕರೆದಿದ್ದಾರೆ. ಮಾನವನ ಹಕ್ಕುಗಳು ಹೇಗಿರಬೇಕು ಎಂಬುದರ ಬಗ್ಗೆ ವಿಶ್ವಸಂಸ್ಥೆಯ ಕರಡು ಸಿದ್ಧಪಡಿಸುವಾಗ ಗಾಂಧೀಜಿ ಅವರನ್ನು ಕೇಳುತ್ತಾರೆ ಎಂದು ಹೇಳಿದರು.
ನಮ್ಮೊಳಗಿನ ದುರ್ಬಲತೆಯನ್ನು ಮೀರಿ ನಿಲ್ಲಬೇಕು ಎಂಬುದೇ ಗಾಂಧಿ ವಾರ ಧ್ಯೇಯ ವಾಕ್ಯವಾಗಿತ್ತು. ಅದೇ ಮಾದರಿಯಲ್ಲಿ ಅವರ ಕಾನೂನು ಕಲಿಕೆಯ ಅಭ್ಯಾಸ ವಿಭಿನ್ನವಾದದು. ವೃತ್ತಿ ಯಾವುದೇ ಇರಲಿ ಅದರ ಸಂಪೂರ್ಣ ಪ್ರಯೋಜನ ಸಮಾಜದ ಶ್ರೇಯೋಭಿವೃದ್ಧಿಗೆ ಸಿಗಬೇಕು ಎಂದು ಲೇಖಕ ಎ.ಅಣ್ಣಾಮಲೈ ಅಭಿಪ್ರಾಯಪಟ್ಟರು.
ಇನ್ನು ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವುಡೇ ಪಿ. ಕೃಷ್ಣ, ಪ್ರೊ.ಸುರೇಶ್ ನಾಡಗೌಡ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ಮುಂದಿನ ತಿಂಗಳು ನಡೆಯುವ CII ಶೃಂಗಸಭೆ ಗಡಿಗಳನ್ನು ಮೀರಿದ ನಾವೀನ್ಯತೆಗೆ ಸಾಕ್ಷಿಯಾಗಲಿದೆ: ಕ್ರಿಸ್ ಗೋಪಾಲಕೃಷ್ಣನ್