ಬೆಂಗಳೂರು: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛತಾ ಸೇವೆಯ ಶ್ರಮದಾನ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಪೋಸ್ಟರ್ ತಯಾರಿಕೆ ಸ್ಪರ್ಧೆ ಏರ್ಪಡಿಸಿತ್ತು.
ಸ್ವಚ್ಛತೆ ವಿಷಯದ ಕುರಿತು ಕಂಸಾಳೆ ಜಾನಪದ ನೃತ್ಯ, ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯಿಂದ ಮೋಟಾರ್ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಬೆಂಗಳೂರು ವಿಭಾಗದ ವಿವಿಧ ರೈಲ್ವೆ ನಿಲ್ದಾಣಗಳು, ಕಚೇರಿಗಳು, ಕಾರ್ಯಾಗಾರ ಮತ್ತು ರೈಲ್ವೆ ಕಾಲೋನಿಗಳಲ್ಲಿ ಸ್ವಚ್ಛತಾ ಅಭಿಯಾನ, ಶ್ರಮದಾನ ನಡೆಸಲಾಯಿತು.
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಸ್ವಚ್ಛತೆಯ ಕುರಿತಂತೆ ಪ್ರತಿಜ್ಞಾವಿಧಿ ಬೋಧಿಸಿದರು. ಇದರಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಸೆಪ್ಟೆಂಬರ್ 16ರಿಂದ ಸ್ವಚ್ಛತೆಯ ಮೇಲೆ ರೈಲ್ವೆ ಇಲಾಖೆಯು ಪ್ರತಿವರ್ಷ ಸ್ವಚ್ಛತಾ ಪಾಕ್ಷಿಕವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಚೀಲಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ನಿಲ್ಲಿಸಿ ಎಂಬ ಸಂದೇಶದೊಂದಿಗೆ ರೈಲ್ವೆ ಪ್ರಯಾಣಿಕರಿಗೆ ಕಾಗದದ ಚೀಲಗಳು ಹಾಗೂ ಕರಪತ್ರಗಳನ್ನು ವಿತರಿಸಲಾಯಿತು. ಸ್ವಚ್ಛತೆ ಕುರಿತ ಬೀದಿ ನಾಟಕ, ಫ್ಲಾಶ್ ಮಾಬ್ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಶ್ರಮದಾನ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಓದಿ: ಅಕ್ರಮ ಜಾನುವಾರು ಸಾಗಾಟ: ಬಜರಂಗದಳ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ