ಬೆಂಗಳೂರು: ಎಲ್ಲಾ ನಾಯಕರೂ ಸೇರಿ ನನ್ನನ್ನು ಫುಟ್ಬಾಲ್ ರೀತಿಯಲ್ಲಿ ಆಡಿದ್ರೂ. ಅದೇ ಕಾರಣಕ್ಕೆ ನಾನು ಫುಟ್ಬಾಲ್ ಚಿಹ್ನೆ ಆಯ್ಕೆ ಮಾಡಿಕೊಂಡೆ ಎಂದು ಪಕ್ಷದ ಚಿಹ್ನೆ ಕುರಿತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ತಮ್ಮದೇ ವಿಶಿಷ್ಟ ರೀತಿ ವ್ಯಾಖ್ಯಾನ ಮಾಡಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಹಾಗೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮತ್ತೆ ಪುಟ್ಬಾಲ್ ಆಟದಲ್ಲಿ ಯಾರು ಎಷ್ಟು ಗೋಲ್ ಹೊಡೆದರೂ, ಯಾರಿಗೆ ಗೋಲ್ಡನ್ ಬೂಟ್ ಸಿಕ್ತು ಅಂತ ನೀವೇ ಬರೆದುಕೊಳ್ಳಿ. ನಾನಂತೂ ಫುಟ್ಬಾಲ್ ಆದೆ ಎಂದು ಮಾರ್ಮಿಕವಾಗಿ ನುಡಿದರು.
ಡಿಸೆಂಬರ್ 25 ರಂದು ನಾನು ನಮ್ಮ ಪಕ್ಷವನ್ನು ಘೋಷಣೆ ಮಾಡಿದೆ, ಈಗಾಗಲೇ ನಾನು ಪಕ್ಷದ ಕನಸುಗಳನ್ನು ಜನರ ಮುಂದೆ ಹೇಳುತ್ತಿದ್ದೇನೆ. ಈ ಪಕ್ಷದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರಿಗೆ ಒಳ್ಳೆಯ ಕೆಲಸ ಆಗಬೇಕು. ಜನರು ಸಹ ನನಗೆ ಸ್ಪಂದಿಸಿದ್ದಾರೆ. 12 ಮಂದಿ ಅಭ್ಯರ್ಥಿಗಳ ಘೋಷಣೆ ಮಾಡಿದ್ದೇನೆ. ಇನ್ನು 50 ಕ್ಷೇತ್ರಗಳಲ್ಲಿ ಪಕ್ಷದ ಚಟುವಟಿಕೆಗಳು ನಡೆಯುತ್ತಿವೆ. 30 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ನೂರಕ್ಕೆ ನೂರರಷ್ಟು ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ರಾಜಕೀಯ ಮಾಡುವಾಗ ಏನು ಸಮಸ್ಯೆ ಇತ್ತು. ಅಂತ ಗೊತ್ತಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ನಾನು ಹೋದ ಕಡೆ ಜನರು ನನ್ನ ಬಳಿ ಬಂದು ನಿಮ್ಮನ್ನು ಗೆಲ್ಲಿಸುತ್ತೇವೆಂದು ಹೇಳುತ್ತಿದ್ದಾರೆ. ನಾನು ಜನರ ಆಸೆಗಳನ್ನು ಸಂಪೂರ್ಣವಾಗಿ ಪೂರೈಸುತ್ತೇನೆ ಎಂದು ಹೇಳಿದರು.
ಚುನಾವಣಾ ಪೂರ್ವ ಮೈತ್ರಿ ಇಲ್ಲ: ಯಾರ ಜೊತೆಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಸೇರಿದಂತೆ ಯಾವ ಪಕ್ಷದ ನಾಯಕರು ನನ್ನ ಸಂಪರ್ಕ ಮಾಡಿಲ್ಲ. ನನ್ನ ಪರವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ರೆಡ್ಡಿ ಮುಂದೆ ಪ್ರಚಾರ ಮಾಡುತ್ತಾರೆ ಅನ್ನೋದು ಸಂಪೂರ್ಣ ಸುಳ್ಳು. ನನ್ನನ್ನು ಗೊಂದಲದಲ್ಲಿ ಸಿಲುಕಿಸಲು ಈ ರೀತಿ ಚರ್ಚೆಗಳು ಬರುತ್ತಿವೆ. ಆದರೆ, ನಾನು ಯಾವುದೇ ಗೊಂದಲಕ್ಕೆ ಸಿಲುಕುವುದಿಲ್ಲ. ನನ್ನ ಗುರಿ ಏನು ಇದೆಯೋ ಆ ಕಡೆ ಗಮನ ಕೊಡುತ್ತೇನೆ ಎಂದರು.
ಸುಳಿವು: ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಿ ನಮಗೆ ಶಕ್ತಿ ಇರುತ್ತದೆಯೋ ಅಲ್ಲಿ ಸ್ಪರ್ಧೆ ಮಾಡುತ್ತೇವೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸಂಘಟನೆ ನಡೆದಿದೆ. ಅಲ್ಲಿ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಗೆಲ್ಲುವ ಶಕ್ತಿ ಇದ್ದ ಕಡೆ ಮಾತ್ರ ಸ್ಪರ್ಧೆ ಮಾಡ್ತೇವೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಶ್ರೀರಾಮುಲು ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಜನಾರ್ದನ್ ರೆಡ್ಡಿ ಹೇಳಿದರು.
‘ಫುಟ್ಬಾಲ್ ಸಮರ’: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪಕ್ಷ ಪ್ರಚಾರ ಕೈಗೊಂಡಿದ್ದ ರೆಡ್ಡಿ ಆಕಸ್ಮಿಕವಾಗಿ 2008ರಲ್ಲಿ ಗಂಗಾವತಿಯಲ್ಲಿ ನಡೆದಿದ್ದ `ಫುಟ್ಬಾಲ್ ಸಮರ' ಪ್ರಕರಣ ನೆನಪಿಸಿದ್ದಾರೆ. 2008ರಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಜನಾರ್ದನ ರೆಡ್ಡಿ ಅವರು ಗಂಗಾವತಿಯ ಬಿಜೆಪಿ ಅಭ್ಯರ್ಥಿಯಾಗಿದ್ದ ಪರಣ್ಣ ಮುನವಳ್ಳಿ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅಂದಿನ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಯನ್ನು ಇಕ್ಬಾಲ್-ಎಕ್ಬಾಲ್ ಫುಟ್ಬಾಲ್ ತರ ಆಡುತ್ತೇನೆ ಎಂದು ರೆಡ್ಡಿ ಬಹಿರಂಗವಾಗಿಯೇ ಟೀಕಿಸಿದ್ದರು. ಇದು 2008 ಚುನಾವಣೆಯಲ್ಲಿ ಸಖತ್ ಹಾಟ್ ಟಾಫಿಕ್ ಆಗಿ ಮಾರ್ಪಟ್ಟಿತ್ತು ಅಲ್ಲದೇ ಬಿಜೆಪಿಗೆ ಪ್ಲಸ್ ಪಾಯಿಂಟ್ ಕೂಡ ಆಗಿತ್ತು.
ಇಂದು ಸ್ವತಃ ನಾನೇ ಪುಟ್ಬಾಲ್ ಆಡಬೇಕಾಗಿದೆ: ಅಂದು ಪರಣ್ಣ ಅವರನ್ನು ಗೆಲ್ಲಿಸಲು ಇಕ್ಬಾಲ್ ಅನ್ಸಾರಿಯನ್ನು ಫುಟ್ಬಾಲ್ ಆಡ್ತೇನೆ ಎಂದು ಹೇಳಿದ್ದೆ. ಆದರೆ, ಆ ಅವಕಾಶವನ್ನು ದೇವರು ಮರುಸೃಷ್ಟಿ ಮಾಡಿದ್ದಾನೆ. ಅದೇನೋ ಗೊತ್ತಿಲ್ಲ. ಅಂದು ಯಾರನ್ನು ಫುಟ್ಬಾಲ್ ಅಡ್ತೇನೆ ಎಂದು ಹೇಳಿದ್ದೆನೋ ಅದೇ ಕ್ಷೇತ್ರಕ್ಕೆ ದೇವರು ಇಂದು ನನ್ನನ್ನು ಕಳಿಸಿದ್ದಾನೆ. ಅಂದು ಇನ್ನೊಬ್ಬರ ಪರವಾಗಿ ಫುಟ್ಬಾಲ್ ಅಡ್ತೇನೆ ಎಂದಿದ್ದೆ. ಆದರೆ ಇಂದು ಸ್ವತಃ ನಾನೇ ಫುಟ್ಬಾಲ್ ಆಡಬೇಕಾಗಿದೆ. ಇದು ವಿಚಾರವಷ್ಟೇ. ನಾನು ಇಲ್ಲಿ ಯಾರನ್ನೋ ಸೋಲಿಸಲು ಬಂದಿಲ್ಲ. ಆದರೆ ರಾಜಕೀಯ ಪುನರ್ಜನ್ಮ ಪಡೆಯಲು ಆ ಆಂಜನೇಯನ ಅನುಗ್ರಹದಿಂದ ಕೆಆರ್ಪಿಪಿ ಸ್ಥಾಪಿಸಿ ಅದನ್ನು ಗಂಗಾವತಿಯಿಂದಲೇ ಆರಂಭಿಸಿದ್ದೇನೆ ಎಂದು ಜನಾರ್ದನ್ ರೆಡ್ಡಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಜನರಲ್ಲಿ ಜಾತಿ ಧರ್ಮದ ವೈಷಮ್ಯ ಬಿತ್ತಿ, ಒಡೆದು ಆಳುವ ಪಕ್ಷ ನಮ್ಮದಲ್ಲ: ಹೆಚ್ ಡಿ ದೇವೇಗೌಡ