ಬೆಂಗಳೂರು: ಅನಿಲ ಸಂಸ್ಕರಣೆ ಹಾಗೂ ವಿತರಣೆ ಮಾಡುವ ಗೇಲ್ ಸಂಸ್ಥೆಯು ನೆಲದಡಿಯಲ್ಲಿ ಅಳವಡಿಸಿದ್ದ ಅಡುಗೆ ಅನಿಲ ಸಂಪರ್ಕಿಸುವ ಪೈಪ್ನಲ್ಲಿ ಸೋರಿಕೆಯಾಗಿ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟವಾಗಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಲೈಖಾ ಅಂಜುಮ್(45) ಮುಬಾಸಿರಾ (40) ಗಾಯಾಳುಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಚ್ಎಸ್ಆರ್ ಲೇಔಟ್ನ ಮದೀನಾ ಮಸೀದಿ ಬಳಿ ಜಮೀರ್ ಅಹಮದ್ ಎಂಬುವರ ಸೇರಿದ ಮನೆಯಲ್ಲಿ ಇಂದು ಬೆಳಗ್ಗೆ ದುರಂತ ಸಂಭವಿಸಿದೆ. ರಸ್ತೆಯೊಂದರಲ್ಲಿ ಬಿಬಿಎಂಪಿಯು ಡ್ರೈನೇಜ್ ಪೈಪ್ ಅಳವಡಿಸುವ ಸಂದರ್ಭದಲ್ಲಿ ಗೇಲ್ ಕಂಪನಿ ಅಳವಡಿಸಿದ್ದ ಪೈಪ್ಗೆ ತಗುಲಿ ಸೋರಿಕೆಯಾಗಿದೆ. ಈ ಸಂಬಂಧ ಮನೆಯೊಂದರಲ್ಲಿದ್ದ ಎರಡು ಸಿಲಿಂಡರ್ಗಳು ಸ್ಫೋಟಗೊಂಡಿವೆ. ಸ್ಫೋಟದ ರಭಸಕ್ಕೆ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಇಬ್ಬರನ್ನೂ ಆಸ್ಪತ್ರೆ ದಾಖಲಿಸಲಾಗಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟ ದುರಂತದ ಪರಿಣಾಮ ಮನೆಯಲ್ಲಿರುವ ಪಿಠೋಪಕರಣಗಳು ದ್ವಂಸಗೊಂಡಿವೆ. ಮಾಹಿತಿ ಆಧರಿಸಿ ಎಚ್ಎಸ್ಆರ್ ಲೇಔಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಗೇಲ್ ಕಂಪನಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗೇಲ್ ಗ್ಯಾಸ್ ಪೈಪ್ ಹಾದು ಹೋಗಿದೆ ಎಂದು ಬೋರ್ಡ್ ಸಹ ಅಳವಡಿಸಿಲ್ಲ. ಕಾಮಗಾರಿ ವೇಳೆ ಸಹ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಪೈಪ್ ಲೈನ್ ಡ್ಯಾಮೇಜ್ ಆಗಿದೆ. ಜಮೀರ್ ಅವರ ಮನೆಯವರು ಅಡುಗೆ ಮಾಡುವುದಕ್ಕೆ ಹೋದಾಗ ಸಿಲಿಂಡರ್ ಬ್ಲಾಸ್ಟ್ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಿಲಿಂಡರ್ ಸ್ಫೋಟಗೊಂಡು ಬಾಲಕ ಸಾವು: ಇತ್ತೀಚೆಗೆ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಗಡಿಯೊಂದರಲ್ಲಿ ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ಮಾಡುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡು, ಅಂಗಡಿ ಮುಂದೆ ಆಟವಾಡುತ್ತಿದ್ದ 13 ವರ್ಷದ ಮಹೇಶ್ ಎನ್ನುವ ಬಾಲಕನೋರ್ವ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ರಿಫಿಲ್ಲಿಂಗ್ ಮಾಡುವಾಗ ಉಂಟಾದ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ದುರ್ಘಟನೆ ನಡೆದಿತ್ತು.
ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿ ಹತ್ತು ಮಂದಿಗೆ ಗಾಯ: ಈ ಘಟನೆಗಿಂತ ಹಿಂದೆ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಹತ್ತು ಮಂದಿ ಗಾಯಗೊಂಡ ಘಟನೆ ರಾಜಾಜಿನಗರದಲ್ಲಿ ನಡೆದಿತ್ತು. ಮನೆಯಲ್ಲಿದ್ದ ಎಲ್ಲರೂ ಗಾಯಗೊಂಡಿದ್ದು, ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿತ್ತು. ಸಮಾರಂಭವಿದ್ದ ಕಾರಣ ಮನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಸೇರಿದ್ದರು. ಬೆಳ್ಳಂ ಬೆಳಗ್ಗೆ ಅಡುಗೆ ಮಾಡಲು ಅಡುಗೆ ಕೋಣೆಗೆ ಹೋದಾಗ ಸಿಲಿಂಡರ್ ಬ್ಲಾಸ್ಟ್ ಆಗಿತ್ತು.
ಎಲೆಕ್ಟ್ರಿಕ್ ವಾಹನ ಬ್ಯಾಟರಿ ಸ್ಫೋಟ: ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಚಾರ್ಜಿಂಗ್ಗೆ ಹಾಕಿದ್ದಾಗ ವಾಹನ ಬ್ಯಾಟರಿ ಸ್ಫೋಟಗೊಂಡು ಮನೆಯೊಂದು ಸುಟ್ಟು ಭಸ್ಮವಾದ ಘಟನೆ ಮಂಡ್ಯದಲ್ಲಿ ಮೊನ್ನೆಯಷ್ಟೆ ನಡೆದಿತ್ತು. ಬ್ಯಾಟರಿ ಬ್ಲಾಸ್ಟ್ಗೆ ಮನೆಯಲ್ಲಿದ್ದ ಎಲೆಕ್ಟ್ರಿಕ್ ವಸ್ತುಗಳಾದ ಟಿವಿ, ಫ್ರಿಡ್ಜ್, ಧವಸ ಧಾನ್ಯ ಸೇರಿದಂತೆ ಸುಮಾರು 5 ಲಕ್ಷ ರೂ ಮೌಲ್ಯದ ವಸ್ತುಗಳು ಸುಟ್ಟು, ಮನೆಯವರು ನಷ್ಟ ಅನುಭವಿಸಿದ್ದರು. ಆ ವೇಳೆ ಮನೆಯವರು ಎಲ್ಲರೂ ಹೊರಬಂದ ಕಾರಣ, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.
ಇದನ್ನೂ ಓದಿ: ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟ: 10 ಮಂದಿಗೆ ಗಾಯ