ಬೆಂಗಳೂರು: ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿರುವ ಸಿಎಂ ಐಟಿ ದಾಳಿ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ಸಿಎಂ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ವಕ್ತಾರ ಗೋ.ಮಧುಸೂದನ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಯಾವುದೇ ಸಚಿವರು, ಶಾಸಕರು ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಗಳ ಮೇಲೆ ಐಟಿ ದಾಳಿ ನಡೆದಿರಲಿಲ್ಲ. ದಾಳಿ ನಡೆದಿದ್ದು ಕಾಳಧನ ಹೊಂದಿದ್ದ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರ ಮೇಲೆ. ಆದರೆ ಇಡೀ ಮಂತ್ರಿ ಮಂಡಲ ಆದಾಯ ತೆರಿಗೆ ಇಲಾಖೆ ಮುಂದೆ ಪ್ರತಿಭಟನೆ ನಡೆಸಿತು. ಅಂದರೆ ಇವರಿಗೆ ಕೋಪ ಬರಲು ಕಾರಣ ಖಂಡಿತ ಐಟಿ ದಾಳಿಯಲ್ಲಿ ಗುತ್ತಿಗೆದಾರರಿಂದ ಸಿಕ್ಕಿರುವ ಹಣ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖರಿಗೆ ಸೇರಿದ್ದು ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಈಗ ಸಿಎಂ, ಡಿಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಮೈತ್ರಿ ಸರ್ಕಾರದ ಪ್ರಮುಖರು ನಾಡಿನ ಜನತೆಗೆ ಲೆಕ್ಕ ಕೊಡಬೇಕು ಎಂದು ಒತ್ತಾಯಿಸಿದರು.
ನಿನ್ನೆ ಸಿಎಂ ಕುಮಾರಸ್ವಾಮಿ ಎರಡು ಮಹಾಪರಾಧ ಮಾಡಿದ್ದಾರೆ. ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿರುವ ಅವರು ಆದಾಯ ತೆರಿಗೆ ದಾಳಿಯ ಬಗ್ಗೆ ತಮಗೆ ಬಂದಿದ್ದ ಮಾಹಿತಿಯನ್ನು ಮೊದಲೇ ಬಹಿರಂಗ ಪಡಿಸಿದ್ದಾರೆ. ಇದರಿಂದ ತಾವು ಕಳ್ಳರ ಪರವಾದ ಮುಖ್ಯಮಂತ್ರಿ ಎಂದು ಸಾಬೀತು ಪಡಿಸಿದ್ದಾರೆ. ಎರಡನೇಯದಾಗಿ ಸಿಎಂ ಆಗಿ ಕೇಂದ್ರ ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡುವ ಮೂಲಕ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ಸಿಎಂ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದರು.
ಯಾರು ಕಳ್ಳರು ಇರುತ್ತಾರೋ ಅವರನ್ನು ಸಾರ್ವಜನಿಕರ ಎದುರು ನೆಲದ ಮೇಲೆ ಕೂರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ನಿನ್ನೆ ಕಳ್ಳರ ಪರವಾಗಿ ಪ್ರತಿಭಟನೆ ಮಾಡಿದ ಮೈತ್ರಿ ಸರ್ಕಾರದ ಪ್ರಮುಖರನ್ನು ನೆಲದ ಮೇಲೆ ಕೂರಿಸಿಯೇ ಬಿಟ್ಟರಲ್ಲಾ ಎಂದು ವ್ಯಂಗ್ಯವಾಡಿದ ಮಧುಸೂದನ್, ಈ ಸರ್ಕಾರವನ್ನು ತಕ್ಷಣವೇ ವಜಾ ಮಾಡಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದರು.
ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿಲ್ಲ. ಒಂದು ವೇಳೆ ದಾಳಿ ಮಾಡಿದ್ದಿದ್ದರೆ ಅವರಿಗೆ ಜಲ್ಲಿ, ಎಂ ಸ್ಯಾಂಡ್, ಮರಳು ಸಾಕಷ್ಟು ಸಿಗುತ್ತಿತ್ತು. ಯಾಕೆಂದರೆ ಪುಟ್ಟರಾಜು ಜಲ್ಲಿ ಕ್ರಶರ್ ವ್ಯವಹಾರ ನಡೆಸುತ್ತಾರೆ ಎಂದು ವ್ಯಂಗ್ಯವಾಡಿದರು.
ಈಗ ಸಿಎಂ ಅವರು ಬಿಜೆಪಿಯವರ ಮೇಲಿನ ಪ್ರಕರಣಗಳ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅವರು ಕೇವಲ ಬ್ಲಾಕ್ಮೇಲ್ ಮಾಡುವುದು ಬೇಡ. ತಕ್ಷಣ ಬಿಡುಗಡೆ ಮಾಡಲಿ. ಸುಮ್ಮನೆ ಡ್ರಾಮಾ ಮಾಡುವುದು ಬೇಡ ಎಂದು ಕಾಲೆಳೆದರು.
ತೇಜಸ್ವಿ ಸೂರ್ಯ ವಿರುದ್ಧ ಬಂದಿರುವುದು ಮೀ ಟೂ ಆರೋಪ. ಅಂದರೆ ಅದು ಅವರಿಬ್ಬರ ವೈಯಕ್ತಿಕ ವಿಚಾರ. ಅದರಲ್ಲಿ ಮೂರನೇ ವ್ಯಕ್ತಿಯಾದ ಬಿಜೆಪಿ ಮಧ್ಯ ಪ್ರವೇಶಿಸುವುದು ಸಾಧ್ಯವಿಲ್ಲ. ಮೇಲಾಗಿ ತೇಜಸ್ವಿ ಸೂರ್ಯ ಅಭ್ಯರ್ಥಿ ಎಂದು ಘೋಷಣೆ ಆದ ನಂತರ ಈ ಆರೋಪ ಮಾಡಲಾಗಿದೆ. ಹಾಗಾಗಿ ಇದೊಂದು ರಾಜಕೀಯ ಪ್ರೇರಿತ ಆರೋಪವಾಗಿದೆ. ಅದನ್ನು ಡಸ್ಟ್ ಬಿನ್ಗೆ ಹಾಕುವುದು ಸೂಕ್ತ ಎಂದು ಅಭ್ಯರ್ಥಿಯನ್ನು ಸಮರ್ಥಿಸಿಕೊಂಡರು.