ಬೆಂಗಳೂರು: ಕೋವಿಡ್-19, ನೆರೆ ಸೇರಿದಂತೆ ಹತ್ತು ಹಲವು ಸವಾಲುಗಳ ನಡುವೆಯೂ ಕರ್ನಾಟಕದ ಜಿಡಿಪಿ (ಆರ್ಥಿಕ ವೃದ್ಧಿ) ದೃಢ ಮತ್ತು ಸುಸ್ಥಿರವಾಗಿ ಬೆಳೆಯುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಅದರ ಪ್ರಮಾಣ 35 ಲಕ್ಷ ಕೋಟಿ ರೂ. ಮುಟ್ಟುವ ಸಾಧ್ಯತೆ ಇದೆ. ಈ ಕನಸು ನನಸಾಗಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಸ್ಪೇರ್ ಟ್ರಾವೆಲ್ ಮೀಡಿಯಾ ಮತ್ತು ಎಕ್ಸಿಬೀಷನ್ ಸಂಸ್ಥೆ ಆಯೋಜಿಸಿದ್ದ ’ಭವಿಷ್ಯದ ಕರ್ನಾಟಕ ಶೃಂಗಸಭೆ- 2020’ ಯಲ್ಲಿ ಆನ್‌ಲೈನ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯವು 18 ಲಕ್ಷ ಕೋಟಿ ರೂ. ಜಿಡಿಪಿಯನ್ನು ಹೊಂದಿದೆ. ಐದು ವರ್ಷಗಳಲ್ಲಿ ಇದರ ಪ್ರಮಾಣ 36 ಲಕ್ಷ ಕೋಟಿ ರೂ. ದಾಟಲಿದೆ. ಅದರ ನಂತರದ ಐದು ವರ್ಷಗಳಲ್ಲಿ 75 ಲಕ್ಷ ಕೋಟಿ ರೂ. ಜಿಡಿಪಿ ಹೊಂದುವುದು ನಮ್ಮ ಗುರಿ ಎಂದರು.
ರಾಜ್ಯದ ಆರ್ಥಿಕತೆ ಬೆನ್ನೆಲುಬಾಗಿರುವ ಕೃಷಿ, ಐಟಿ-ಬಿಟಿ, ಕೈಗಾರಿಕೆ, ಉತ್ಪಾದನೆ ಹಾಗೂ ಸೇವಾ ವಲಯಗಳಿಗೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಐದು ವರ್ಷಗಳಲ್ಲಿ ನಿಗದಿತ ಮೈಲುಗಲ್ಲು ದಾಟಲು ಸರ್ವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು- ಬೀದರ್ ಕೈಗಾರಿಕಾ ಕಾರಿಡಾರ್:
ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಮಾಡಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಪೂರಕವಾಗಿ ಮೈಸೂರು- ಬೀದರ್ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈಗಾಗಲೇ ಇರುವ ಬೆಂಗಳೂರು- ಚೆನ್ನೈ ಮತ್ತು ಬೆಂಗಳೂರು- ಮುಂಬೈ ಕಾರಿಡಾರ್‌ಗಳಂತೆ ಈ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದಪಡಿ ಕಾಯ್ದೆ, ಕಾರ್ಮಿಕ ಕಾಯ್ದೆಗಳ ಸರಳೀಕರಣ ಸೇರಿದಂತೆ ಹತ್ತಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದರಿಂದ ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದು ಅತ್ಯಂತ ಸರಳವಾಗಿದೆ ಎಂದರು.
ಬಹೃತ್ ಕೈಗಾರಿಕೆಗಳಿಗೂ ಸಿಂಗಲ್ ವಿಂಡೋ ವ್ಯವಸ್ಥೆ:
ದೇಶದಲ್ಲಿಯೇ ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯ ಅತ್ಯಂತ ಮಾದರಿ ನೀತಿಯನ್ನು ಅನುಸರಿಸುತ್ತಿದೆ. ಯಾವುದೇ ಕೈಗಾರಿಕೆಯಾಗಲಿ ಕಾನೂನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಿ, ಸ್ಥಾಪಿಸಬೇಕು. ಆ ಮೇಲೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಸರ್ಕಾರದ ಅಧೀನದಲ್ಲಿರುವ ಎಲ್ಲಾ ಸಂಸ್ಥೆಗಳನ್ನು ಒಂದೆಡೆಗೆ ಅನುಸಂಧಾನಗೊಳಿಸಲಾಗಿದ್ದು, ಏಕಗವಾಕ್ಷಿ ಮೂಲಕ ಎಲ್ಲಾ ಬಗೆಯ ಅನುಮತಿಗಳನ್ನು ಯಾವುದೇ ಅಡ್ಡಿ- ಆತಂಕವಿಲ್ಲದೆ ಪಡೆದುಕೊಳ್ಳಬಹುದು. ಗುಜರಾತ್ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಇಂಥ ವ್ಯವಸ್ಥೆ ಇದೆ. ನಮ್ಮ ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳಿಗೂ ಈ ಅವಕಾಶ ಕಲ್ಪಿಸಲಾಗಿದೆ ಎಂದು ಡಾ. ಅಶ್ವತ್ಥ ನಾರಾಯಣ ವಿವರಿಸಿದರು.
ಸದೃಢ ಕರ್ನಾಟಕವನ್ನು ಕಟ್ಟಲು ಎಲ್ಲಾ ರೀತಿಯ ಸವಾಲುಗಳನ್ನು ಮೆಟ್ಟಿ ನಿಂತು ಸರ್ಕಾರ ಕೆಲಸ ಮಾಡುತ್ತಿದೆ. ರಾಜಕೀಯ ಸವಾಲುಗಳನ್ನು ಕೂಡ ಯಶಸ್ವಿಯಾಗಿ ಎದುರಿಸಲಾಗುತ್ತಿದೆ. ಏನೇ ಆದರೂ ಅಭಿವೃದ್ಧಿಯಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಇದು ಸರ್ಕಾರದ ಒಂದು ಅಂಶದ ನೀತಿಯಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೋವಿಡ್ ಕಂಟ್ರೋಲ್‌ನಲ್ಲಿದೆ:
ರಾಜ್ಯದಲ್ಲಿ ಸದ್ಯಕ್ಕೆ ಕೋವಿಡ್-19 ಸೋಂಕು ನಿಯಂತ್ರಣದಲ್ಲಿದೆ. ಸರ್ಕಾರದ ವಶದಲ್ಲಿರುವ ಒಟ್ಟು ಕೋವಿಡ್ ಹಾಸಿಗೆಗಳ ಪೈಕಿ ಶೇ.30 ರಷ್ಟು ಖಾಲಿ ಇವೆ. ಈಗ ಬೇಡಿಕೆಗಿಂತ ನಮ್ಮಲ್ಲಿರುವ ಸೌಲಭ್ಯಗಳೇ ಹೆಚ್ಚಾಗಿವೆ. ಹೀಗಾಗಿ ಯಾವುದೇ ಆತಂಕವಿಲ್ಲ. ಜನರು ಧೈರ್ಯ ವಾಗಿರಬಹುದು ಎಂದು ಅವರು ತಿಳಿಸಿದರು.