ಬೆಂಗಳೂರು : ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲು ಹೊರಟಿರುವ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಹೇಳಿದ್ದರಿಂದ ರಾಜ್ಯ ಸರ್ಕಾರ ಮುಜುಗರಕ್ಕೀಡಾಗಿರುವ ಅಂಶ ಬೆಳಕಿಗೆ ಬಂದಿದೆ. ಇದೇ ವೇಳೆ, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್.ಎಸ್. ಪ್ರಸಾದ್ ಅವರು ಸೇವೆಯಿಂದ ನಿವೃತ್ತಿ ಪಡೆಯಲು ಒಂದು ತಿಂಗಳು ಬಾಕಿ ಇದೆ. ಹೀಗಿರುವಾಗಲೇ ಅವರ ಜಾಗಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್ ಅಹ್ಮದ್ ಅವರನ್ನು ನಿಯೋಜಿಸಲು ಸರ್ಕಾರ ಪ್ರಯತ್ನ ಆರಂಭಿಸಿದೆ. ಈ ಬೆಳವಣಿಗೆ ಅಧಿಕಾರಿ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಐ.ಎನ್.ಎಸ್.ಪ್ರಸಾದ್ ಅವರ ನಿವೃತ್ತಿಯಿಂದ ತೆರವಾಗುವ ಜಾಗಕ್ಕೆ ಅತೀಕ್ ಅಹ್ಮದ್ ಅವರನ್ನು ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ. ಇದಕ್ಕೂ ಮುನ್ನ ಒಂದು ತಿಂಗಳ ಮಟ್ಟಿಗೆ ತಾತ್ಕಾಲಿಕವಾಗಿ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯನ್ನು ಸೃಷ್ಟಿಸಿ ಅತೀಕ್ ಅಹ್ಮದ್ ಅವರನ್ನು ಅಲ್ಲಿಗೆ ವರ್ಗಾವಣೆ ಮಾಡಲಾಗಿತ್ತು. ಚುನಾವಣೆಗೂ ಮುನ್ನ ಜನರಿಗೆ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಯೋಜನೆಗಳ ಜಾರಿಗೆ ಹಣ ಹೊಂದಿಸುವ ಬಗ್ಗೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್.ಎಸ್ ಪ್ರಸಾದ್ ಅವರನ್ನು ಕೇಳಿತ್ತು. ಆದರೆ ಈ ಯೋಜನೆಗಳಿಗೆ 50 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ಬೇಕಿದೆ. ಇಷ್ಟು ಪ್ರಮಾಣದ ಹಣವನ್ನು ಹೊಂದಿಸಿಕೊಡಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿರುವ ಮಾಹಿತಿ ದೊರೆತಿದೆ.
ರಾಜ್ಯ ಸರ್ಕಾರದ ಹಣಕಾಸಿನ ಪರಿಸ್ಥಿತಿ ಮತ್ತು ಇರುವ ಹಣಕಾಸು ಬದ್ಧತೆಗಳನ್ನು ನಿರ್ವಹಿಸಲು ಶ್ರಮ ಪಡಬೇಕಿರುವ ಈ ಕಾಲದಲ್ಲಿ ಹೆಚ್ಚುವರಿಯಾಗಿ 50 ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ಹೊಂದಿಸಿಕೊಡಲು ಆಗುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಹೆಚ್ಚೆಂದರೆ, 2 ರಿಂದ 3 ಸಾವಿರ ಕೋಟಿ ರೂ. ಗಳನ್ನು ಹೆಚ್ಚುವರಿಯಾಗಿ ಒದಗಿಸಬಹುದು. ಇದಕ್ಕಿಂತ ಹೆಚ್ಚಿನ ಪ್ರಮಾಣದ ಹಣ ಬೇಕೆಂದರೆ ಎಂದರೆ ನಾವು ಜನರ ಮೇಲೆ ಹೆಚ್ಚು ತೆರಿಗೆ ಹೇರುವ ಪರಿಸ್ಥಿತಿ ಬರುತ್ತದೆ. ಈ ಮಧ್ಯೆ ಸರ್ಕಾರದ ವತಿಯಿಂದ ಈಗಾಗಲೇ ಅಂಗೀಕರಿಸಲಾಗಿರುವ ಕಾಮಗಾರಿಗಳ ಬಾಬ್ತಿನಲ್ಲೇ 24 ಸಾವಿರ ಕೋಟಿ ರೂ.ಗಳಷ್ಟು ಬಾಕಿ ನೀಡಬೇಕಿದ್ದು, ಇದಕ್ಕೆ ಹಣ ಹೊಂದಿಸಲು ಪರದಾಡಬೇಕಿದೆ.
ಗ್ಯಾರಂಟಿಯಿಂದ ಆರ್ಥಿಕ ಸಂಕಷ್ಟ: ಸರ್ಕಾರದ ವಾರ್ಷಿಕ ಬಜೆಟ್ 3 ಲಕ್ಷ ಕೋಟಿ ರೂ.ಗಳಷ್ಟಿದ್ದು, ಈ ಪೈಕಿ 70 ಸಾವಿರ ಕೋಟಿ ರೂ.ಗಳಿಗೂ ಅಧಿಕ ಸಾಲವನ್ನು ಈ ವರ್ಷ ಪಡೆಯುತ್ತಿದ್ದೇವೆ. ಉಳಿದಂತೆ ಬೇರೆ ಬೇರೆ ಬಾಬ್ತುಗಳಲ್ಲಿ ರಾಜ್ಯ ಸರ್ಕಾರ ಜನರಿಗೆ 30 ಸಾವಿರ ಕೋಟಿ ರೂ.ಗಳಷ್ಟು ಸಬ್ಸಿಡಿ ನೀಡುತ್ತಿದೆ. ಈಗ 50 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚುವರಿ ಹೊರೆ ಹೊರಬೇಕಾಗಿ ಬಂದರೆ, ರಾಜ್ಯದ ಆರ್ಥಿಕ ಶಿಸ್ತು ಹಳಿ ತಪ್ಪುತ್ತದೆ. ಈ ಮಧ್ಯೆ ಈಗಾಗಲೇ ರಾಜ್ಯ ಸರ್ಕಾರದ ಮೇಲೆ ಇರುವ ಸಾಲದ ಹೊರೆ ಐದೂವರೆ ಲಕ್ಷ ಕೋಟಿ ರೂ.ಗಳನ್ನು ಮೀರಿದ್ದು, ಇದರ ಮೇಲಿನ ಅಸಲು, ಬಡ್ಡಿ, ಚಕ್ರಬಡ್ಡಿಗಾಗಿ ಪ್ರತಿ ವರ್ಷ ದೊಡ್ಡ ಪ್ರಮಾಣದ ಹಣವನ್ನು ನಾವು ಕಟ್ಟಬೇಕಿದೆ.
ಹಣ ಹೊಂದಿಸುವುದು ಅಸಾಧ್ಯ: ಹೀಗೆ ಬಜೆಟ್ನ ಬಹುತೇಕ ಹಣ ಯೋಜನೇತರ ಕೆಲಸಗಳಿಗೆ ಹರಿದು ಹೋದರೆ ಯೋಜನೆಯ ಕೆಲಸಕ್ಕೆ ಅಡಚಣೆಯಾಗುತ್ತದೆ. ಆದ್ದರಿಂದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಡುವುದು ಅಸಾಧ್ಯ ಎಂದು ಐ.ಎನ್.ಎಸ್.ಪ್ರಸಾದ್ ಸರ್ಕಾರಕ್ಕೆ ವರದಿ ನೀಡಿದ್ದರು ಎಂದು ಗೊತ್ತಾಗಿದೆ. ಈ ವರದಿಯಿಂದ ಮುಜುಗರಗೊಂಡ ಸರ್ಕಾರ, ಇದೀಗ ಅವರು ಸರ್ಕಾರಿ ಸೇವೆಯಿಂದ ನಿವೃತ್ತರಾಗಲು ಒಂದು ತಿಂಗಳು ಬಾಕಿ ಇರುವಾಗಲೇ, ಅವರ ಜಾಗಕ್ಕೆ ಮತ್ತೋರ್ವ ಅಧಿಕಾರಿಯನ್ನು ತಂದುಕೂರಿಸುವ ಪ್ರಯತ್ನ ಆರಂಭಿಸಿದೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ಗೆ ಹೆಚ್ಚುವರಿ ಖಾತೆ ಹಂಚಿಕೆ