ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂ. ಘೋಷಿಸಿದ ಬೆನ್ನಲ್ಲೆ ಕನ್ನಡಪರ ಸಂಘಟನೆಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿ ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಇನ್ನು ಈ ನಿಗಮ ರದ್ದುಗೊಳಿಸಲು ಸರ್ಕಾರಕ್ಕೆ ಗಡುವು ನೀಡಿದ್ದರು ಕೂಡ ಸರ್ಕಾರ ಯಾವುದಕ್ಕು ಸ್ಪಂದಿಸಿಲ್ಲ. ಈ ನಿಟ್ಟಿನಲ್ಲಿ ನಾಳೆ ರಾಜ್ಯಾದ್ಯಂತ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಇನ್ನು ಈ ಬಂದ್‌ಗೆ ಪರ-ವಿರೋಧ ವ್ಯಕ್ತವಾಗಿದ್ದು, ಕೆಲ ಸಂಘಟನೆಗಳು ಬೆಂಬಲ ನೀಡಿಲ್ಲ. ಇನ್ನು ಕೆಲ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.
ನಾಳಿನ ಬಂದ್‌ಗೆ ಆಟೋ ಚಾಲಕರಿಂದ ಕೂಡ ಬೆಂಬಲ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ನಾಳೆ ಆಟೋ ಸಿಗುವುದಿಲ್ಲ. ನಾಳೆ ಆಟೋ ಸಿಗುತ್ತೆ ಅಂತ ಮನೆಯಿಂದ ಹೊರಗಡೆ ಬಂದರೆ ಪ್ರಯಾಣಿಕರು ಪರದಾಡಬೇಕಾಗುತ್ತೆ. ಈ ಸಂಬಂಧ ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕ ಸಂಘದ ಅಧ್ಯಕ್ಷ ಎಂ.ಮಂಜುನಾಥ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಓಲಾ, ಉಬರ್ ಚಾಲಕರಿಂದ ಸಂಪೂರ್ಣ ಬೆಂಬಲ:
ನಾಳಿನ ಕರ್ನಾಟಕ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಮ್ಮ ಸೇವೆಯನ್ನು ಸಂಪೂರ್ಣ ನಿಲ್ಲಿಸಲಾಗುತ್ತದೆ. ಈಗಾಗಲೇ ನಮ್ಮ ಚಾಲಕರಿಗೆಲ್ಲ ಸಂದೇಶ ರವಾನೆಯಾಗಿದೆ. ಸರ್ಕಾರ ಬಂದ್‌ಗೆ ತಡೆಯೊಡ್ಡಲು ಹರ ಸಾಹಸ ಪಡುತ್ತಿದೆ. ಬಂದ್ ತಡೆಯಲು ಯತ್ನಿಸುತ್ತಿದ್ದು, ಇದಕ್ಕೆ ನಾವು ಬಗ್ಗೋದಿಲ್ಲ ಎಂದು ಓಲಾ, ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಹೇಳಿದ್ದಾರೆ.
ಓದಿ: ಡ್ರಗ್ಸ್ ಜಾಲ: ನಟಿಮಣಿಯರ ಕೂದಲು ಸ್ಯಾಂಪಲ್ ಸಂಗ್ರಹಕ್ಕೆ ಅನುಮತಿ ನೀಡಿದ ಕೋರ್ಟ್