ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಸ್ತುತ ಸ್ಥಿತಿಗತಿಗಳು ಹಾಗೂ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಟಾಸ್ಕ್ ಫೋರ್ಸ್ ಸಮಿತಿ ಬಿಬಿಂಪಿಯಲ್ಲಿ ಸಭೆ ನಡೆಸಿತು.
ಈ ಬಗ್ಗೆ ಚರ್ಚಿಸಲು ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಮೇಯರ್ ಗೌತಮ್ ಕುಮಾರ್, ಪಾಲಿಕೆ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಅಧಿಕಾರಿಗಳು ಭಾಗಿಯಾಗಿದ್ರು.
ಸಭೆ ಬಳಿಕ ಮಾತನಾಡಿದ ಆರ್.ಅಶೋಕ್, ಕೋವಿಡ್-19 ಸೋಂಕನ್ನು ನಿಭಾಯಿಸಲು ರಾಜ್ಯ ಸರ್ಕಾರದಿಂದ 66.85 ಕೋಟಿ ರೂ. ಬೇಡಿಕೆ ಇದ್ದು, ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯ ಅಕೌಂಟ್ನಲ್ಲಿ ಈಗ 1,029 ಕೋಟಿ ರೂ. ಇದೆ. ಮಿನಿಮಮ್ ಐದು ಕೋಟಿ ಇರುವಂತೆ ನೋಡಿಕೊಳ್ಳಲಾಗಿದೆ. ಔಷಧ, ವೈದ್ಯಕೀಯ ಸಲಕರಣೆ ಕೊಂಡುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಇಡೀ ದೇಶದಲ್ಲೇ ಮೊದಲ ರಾಜ್ಯವಾಗಿ ಕೊರೊನಾ ತಡೆಗಟ್ಟಲು ಉತ್ತಮ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆಯೂ ಆಗಿದೆ. ಒಟ್ಟು ಬೆಂಗಳೂರಲ್ಲಿ 22 ಸಾವಿರ ಜನ ಕ್ವಾರಂಟೈನ್ನಲ್ಲಿದ್ದಾರೆ. 3,500 ಪ್ರಾಥಮಿಕ ಸಂಪರ್ಕದ ಜನ ಇದ್ದಾರೆ. ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಸ್ಟ್ಯಾಂಪಿಂಗ್ ಮಾಡಿ, ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ನಗರದಲ್ಲಿ ಆಂಬುಲೆನ್ಸ್ಗಳ ಸಂಖ್ಯೆಯನ್ನು 73ಕ್ಕೆ ಏರಿಸಲಾಗಿದೆ. ಮನೆಯಿಲ್ಲದ ಜನ, ಭಿಕ್ಷುಕರಿಗೆ, ಕೂಲಿ ಕಾರ್ಮಿಕರಿಗೆ ಪಾಲಿಕೆಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಪಾಲಿಕೆಯಿಂದ ಆಹಾರದ ಪ್ಯಾಕೆಟ್ ನೀಡಲಾಗ್ತಿದೆ. ಪಾಲಿಕೆ ಸದಸ್ಯರು ಕೂಡ ಇದಕ್ಕೆ ಸಹಕರಿಸಬೇಕು ಎಂದರು.
ಇನ್ನು ಮಾರುಕಟ್ಟೆಗಳಲ್ಲಿ ಹೆಚ್ಚು ಜನ ಸೇರದಂತೆ, ಆಯಾ ವಾರ್ಡ್ಗಳ ಗ್ರೌಂಡ್ಗಳಲ್ಲಿ ತರಕಾರಿ ಮಾರಲು ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ. ಆರು ಅಡಿ ದೂರದಲ್ಲಿ ಮಾರ್ಕಿಂಗ್ ಮಾಡಿ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಸರ್ಕಾರದಿಂದ ಉಚಿತವಾಗಿ ರೇಷನ್ ನೀಡುವ ಬಗ್ಗೆಯೂ ಯೋಜನೆ ರೂಪಿಸಲಾಗಿದೆ. ಮಸೀದಿಗಳ ಮುಖ್ಯಸ್ಥರ ಜೊತೆಯೂ ಸಭೆ ನಡೆಸಲಾಗಿದೆ. ಪ್ರಾರ್ಥನೆ ಸಮಯದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ತಿಳಿಸಲಾಗಿದೆ ಎಂದರು. ಇಪ್ಪತ್ತೊಂದು ದಿನದಲ್ಲಿ ಕೇವಲ ಎರಡು ದಿನ ಕಳೆದಿದೆ. ಉಳಿದ ದಿನಗಳನ್ನೂ ಯಜ್ಞದ ರೀತಿ ಕಳೆಯಬೇಕು ಎಂದರು.