ಬೆಂಗಳೂರು: ಬಿಬಿಎಂಪಿಯ ಮಂಡೂರು ಗ್ರಾಮದ ಘನ ತ್ಯಾಜ್ಯ ಇಂಧನ ಉತ್ಪಾದನೆ ಸ್ಥಾವರ ನಿರ್ಮಾಣ ಘಟಕದ ಅವ್ಯವಹಾರ ಆರೋಪ ಸಂಬಂಧ ಆಪಾದಿತ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ.
ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್. ರಾಘವೇಂದ್ರ ಅವರ ಕೋಣನಕುಂಟೆಯಲ್ಲಿನ ನಿವಾಸ ಹಾಗೂ ಕಚೇರಿ, ಪಾಲಿಕೆಯ ಮಳೆ ನೀರು ಕಾಲುವೆ ವಿಭಾಗದ(ಎಸ್.ಡಬ್ಲೂ.ಡಿ) ಜಯನಗರ ಬಿಬಿಎಂಪಿ ವಾಣಿಜ್ಯ ಕಟ್ಟಡದ ಕಚೇರಿ ಮೇಲೆ ದಾಳಿ ಮಾಡಿ ಎಸಿಬಿ ಶೋಧ ನಡೆಸಿದೆ. ಅಲ್ಲದೆ, ಆರೋಪಕ್ಕೆ ಸಂಬಂಧಿಸಿದ ಮಹತ್ವದ ದಾಖಲಾತಿ ವಶಕ್ಕೆ ಪಡೆಯಲಾಗಿದೆ. ಕೆಲ ದಿನಗಳ ಹಿಂದೆ ನಾಲ್ವರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆದಿತ್ತು.
ಪ್ರಕರಣ ಹಿನ್ನೆಲೆ:
ಬಿಬಿಎಂಪಿಯ ಮಂಡೂರು ಗ್ರಾಮದ ಘನ ತ್ಯಾಜ್ಯ ಇಂಧನ ಉತ್ಪಾದನೆ ಸ್ಥಾವರ ನಿರ್ಮಾಣ ವಿಚಾರದಲ್ಲಿ ಅವ್ಯವಹಾರ ಸಂಬಂಧ ಮೆ. ಶ್ರೀನಿವಾಸ ಗಾಯತ್ರಿ ರಿಸೋರ್ಸ್ ರಿಕವರಿ ಪ್ರೈವೇಟ್ ಸಂಸ್ಥೆಗೆ 2002 ರಂದು ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸುವ ಯೋಜನೆಗಾಗಿ ಬಿಬಿಎಂಪಿಯಿಂದ ಅಧಿಸೂಚನೆ ಹೊರಡಿಸಲಾಗಿತ್ತು.
ಇದಕ್ಕಾಗಿ ಮಂಡೂರಿನಲ್ಲಿ 35 ಎಕರೆ ಸರ್ಕಾರಿ ಜಮೀನನ್ನು ನೀಡಲಾಗಿದ್ದು, 2006ರ ಒಳಗಾಗಿ ವಿದ್ಯುತ್ ಘಟಕವನ್ನು ಸ್ಥಾಪಿಸುವಂತೆ ಬಿಬಿಎಂಪಿ ಗಡುವು ನಿಗದಿಪಡಿಸಿತ್ತು. ಕಾಲಮಿತಿಯಲ್ಲಿ ಸಂಸ್ಥೆ ಘಟಕ ಸ್ಥಾಪಿಸಿಲ್ಲ. ಮೆ.ಶ್ರೀನಿವಾಸ ಗಾಯತ್ರಿ ರಿಸೋರ್ಸ್ ರಿಕವರಿ ಸಂಸ್ಥೆಗೆ ಘನ ತ್ಯಾಜ್ಯದಿಂದ ವಿದ್ಯುತ್ ಘಟಕ ಸ್ಥಾಪಿಸಲು ಬಿಬಿಎಂಪಿಯಿಂದ ಮಂಜೂರಾಗಿದ್ದ ಜಮೀನನ್ನು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಒತ್ತೆ ಇಟ್ಟು 52.75 ಕೋಟಿ ಸಾಲ ಪಡೆದುಕೊಂಡು ಅಕ್ರಮ ಎಸಗಿದ ಆರೋಪದಡಿ ಎಸಿಬಿ ದಾಳಿ ನಡೆಸಿದೆ.