ಬೆಂಗಳೂರು: ಕೇಂದ್ರ ಸಚಿವರು, ಸಂಸದರುಗಳ ಹೆಸರು ದುರ್ಬಳಕೆ ಮಾಡಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಆರೋಪಿಯನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಅಲಿಯಾಸ್ ಸಂತೋಷ್ ರಾವ್ ಆರೋಪಿ.
ಬಿಇ ವ್ಯಾಸಂಗ ಮಾಡಿರುವ ಈತ ಬೇರೆ ಉದ್ಯಮಿಗಳು, ಸಾರ್ವಜನಿಕರನ್ನು ಪರಿಚಯಿಸಿಕೊಳ್ಳುತ್ತಿದ್ದ. ತನಗೆ ರಾಜ್ಯ ಹಾಗೂ ಕೇಂದ್ರದ ಮಂತ್ರಿಗಳು ಪರಿಚಯ ಎನ್ನುತ್ತಿದ್ದ. ತನ್ನ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವಂತೆ ಕೇಳುತ್ತಿದ್ದ. ಸಚಿವರು, ಸಂಸದರ ಕಚೇರಿಯ ಸೋಗಿನಲ್ಲಿ ತಾನೇ ಉದ್ಯಮಿಗಳಿಗೆ ನಕಲಿ ಕರೆ ಮಾಡುತ್ತಿದ್ದ. ಇದನ್ನು ನಂಬುತ್ತಿದ್ದ ಉದ್ಯಮಿಗಳು ಸಂತೋಷ್ ಜೊತೆ ಉದ್ಯಮ ನಡೆಸಲು ಉತ್ಸುಕರಾಗಿ ಆತನ ಕಂಪನಿಗೆ ಹಣ ಹೂಡಿಕೆ ಮಾಡುತ್ತಿದ್ದರು. ಆದರೆ ಕಂಪನಿಯ ಖಾತೆಯಿಂದ ತನ್ನ ವೈಯಕ್ತಿಕ ಖಾತೆಗೆ ಹಣ ವರ್ಗಾಯಿಸಿಕೊಂಡು ಆರೋಪಿ ವಂಚಿಸುತ್ತಿದ್ದನು. ಅಷ್ಟೇ ಅಲ್ಲದೆ ಮಠ, ದೇವಸ್ಥಾನಗಳಲ್ಲೂ ಇದೇ ರೀತಿ ಹೇಳಿಕೊಂಡಿರುವ ಈತ, ಅನೇಕ ಕಡೆಗಳಲ್ಲಿ ವೇದಿಕೆಗಳಲ್ಲಿ ಸನ್ಮಾನವನ್ನೂ ಸಹ ಸ್ವೀಕರಿಸಿದ್ದಾನೆ. ವಂಚನೆಗೊಳಗಾದ ವ್ಯಕ್ತಿಯೊಬ್ಬರು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇತ್ತೀಚಿನ ಪ್ರಕರಣಗಳು-ಲೋಕಾಯುಕ್ತ ಹೆಸರಿನಲ್ಲಿ ವಂಚನೆ: ಇತ್ತೀಚೆಗೆ ಬೆಂಗಳೂರಿನಲ್ಲಿ ವರದಿಯಾದ ಪ್ರಕರಣವೊಂದರಲ್ಲಿ ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ಇಂಜಿನಿಯರ್‌ಗಳಿಗೆ ಫೋನ್ ಮಾಡಿ ದಾಳಿ ಮಾಡಿಸುವುದಾಗಿ ಬೆದರಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಬೆಳಗಾವಿ ಮೂಲದ ಸಂತೋಷ್ ಕೊಪ್ಪದ್ ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದರು. ಈ ಹಿಂದೆ ಕೂಡ ಈತನನ್ನು ವಂಚನೆ ಪ್ರಕರಣದಡಿ ಬೈಲಹೊಂಗಲ ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದು ಹೊರಬಂದು ಮತ್ತೆ ಹಳೆಯ ಚಾಳಿ ಮುಂದುವರೆಸಿದ್ದ.
ಪೊಲೀಸ್ ಹೆಸರಿನಲ್ಲಿ ವಂಚನೆ: ಪೊಲೀಸರ ಸೋಗಿನಲ್ಲಿ ಜನರನ್ನು ಪರಿಚಯಿಸಿಕೊಂಡು ಪೊಲೀಸರು ಸೀಜ್ ಮಾಡಿರುವ ವಾಹನಗಳನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದ ಘಟನೆ ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ಕೆ.ಲೂರ್ದನಾಥನ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು.
ಕೊರಿಯರ್ ಕಂಪನಿ ಹೆಸರಲ್ಲಿ ಮೋಸ: ಮಾದಕ ಪದಾರ್ಥಗಳನ್ನು ವಿದೇಶಕ್ಕೆ ಕೊರಿಯರ್ ಮಾಡಲು ನಿಮ್ಮ ಆಧಾರ್ ನಂಬರ್ ಬಳಕೆಯಾಗಿದೆ ಎಂದು ಕರೆ ಮಾಡಿ ವ್ಯಕ್ತಿಯೊಬ್ಬರಿಂದ 1.98 ಕೋಟಿ ರೂಪಾಯಿ ಪಡೆದ ಸೈಬರ್ ಖದೀಮರು ಬಳಿಕ ವಂಚಿಸಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.
ಇದನ್ನೂ ಓದಿ: ಆನ್ಲೈನ್ ಮೂಲಕ ಹಣ ಲಪಟಾಯಿಸುವುದಕ್ಕೆ ಬ್ರೇಕ್: ಸರ್ಕಾರದ ಅಧೀನದ ಸ್ಟಾರ್ಟ್ ಅಪ್ ಕಂಪನಿಯಿಂದ ಸಿದ್ದವಾಯ್ತು ಆ್ಯಪ್..!