ಬೆಂಗಳೂರು: ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ಆಪ್ತನೆಂದು, ಫೋಟೋಗಳನ್ನ ತೋರಿಸಿ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಸೀಟು ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ 4.5 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಣ ಪಾವತಿಸಿದ್ದಕ್ಕೆ ಕಾಲೇಜಿನಿಂದ ನಕಲಿ ಶುಲ್ಕ ರಶೀದಿಯನ್ನು ಸಹ ನೀಡಿ ಆರೋಪಿಗಳು ವಂಚಿಸಿದ್ದಾರೆ. 53 ವರ್ಷದ ವ್ಯಕ್ತಿ ಮತ್ತು ಅವರ ಮಗಳು ಕಾಲೇಜಿಗೆ ತೆರಳಿ ವಿಚಾರಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ.
ಆರ್. ಆರ್. ನಗರ ನಿವಾಸಿಯಾದ ದೂರುದಾರರ ಪುತ್ರಿ ಎಂಬಿಬಿಎಸ್ ಮುಗಿಸಿ ಪಿಜಿ ಕೌನ್ಸೆಲಿಂಗ್ ಸಮಯದಲ್ಲಿ ಸೀಟಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಪರಿಚಯಸ್ಥರೊಬ್ಬರ ಮೂಲಕ ಕೊರಟಗೆರೆ ಮೂಲದ ಮೊಹಮ್ಮದ್ ಜುಬೇರ್ ಎಂಬಾತ ಪರಿಚಯವಾಗಿದ್ದ. ಜಯನಗರದ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿ ತುಮಕೂರಿನ ಕಾಲೇಜಿನಲ್ಲಿ ಪಿಜಿ ಸೀಟು ಕೊಡಿಸುವುದಾಗಿ ಭರವಸೆ ನೀಡಿದ್ದ. ಪ್ರತಿಯಾಗಿ 4.5 ಲಕ್ಷ ರೂ. ಹಣ ಪಡೆದಿದ್ದ.
ದೂರುದಾರರು ತಮ್ಮ ಬ್ಯಾಂಕ್ ಖಾತೆಯಿಂದ ಆರೋಪಿಯ ಪೇಟಿಎಂ ಖಾತೆಗೆ ಹಣ ವರ್ಗಾಯಿಸಿದ್ದರು. ನಂತರ ಜುಬೇರ್ ಕಾಲೇಜಿನ ಹೆಸರಿನ ಶುಲ್ಕದ ರಸೀದಿ ನೀಡಿದ್ದ. ಆದರೆ ನಂತರದಲ್ಲಿ ಕಾಲೇಜಿನಿಂದ ಯಾವುದೇ ಮಾಹಿತಿ ಅಥವಾ ಸಂದೇಶಗಳು ಬಾರದಿದ್ದಾಗ ದೂರುದಾರ ಮತ್ತು ಅವರ ಮಗಳು ಕಾಲೇಜಿಗೆ ಭೇಟಿ ನೀಡಿ ವಿಚಾರಿಸಿದಾಗ ವಂಚನೆಯಾಗಿರುವುದು ತಿಳಿದುಬಂದಿದೆ. ಬಳಿಕ ಮೋಸಹೋದ ವ್ಯಕ್ತಿ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇತ್ತೀಚಿನ ಪ್ರಕರಣ- ಮೆಡಿಕಲ್ ಸೀಟ್ ಕೊಡಿಸುವುದಾಗಿ ವಂಚನೆ: ಇತ್ತೀಚಿಗೆ, ವೈದ್ಯಕೀಯ ಶಿಕ್ಷಣದ ಸೀಟು ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಸಂಜಯನಗರ ಠಾಣಾ ಪೊಲೀಸರು ಬಂಧಿಸಿದ್ದರು. ಹೈದರಾಬಾದ್ ಮೂಲದ ಶರತ್ ಗೌಡ ಬಂಧಿತ ಆರೋಪಿ. ಸಂಜಯ ನಗರ ವ್ಯಾಪ್ತಿಯ ನ್ಯೂ ಬಿಇಎಲ್ ರಸ್ತೆಯಲ್ಲಿ ನೆಕ್ಸಸ್ ಎಡು ಎಂಬ ಹೆಸರಿನ ಕಚೇರಿ ತೆರೆದಿದ್ದ, ಸಿಇಟಿಯಲ್ಲಿ ರ‍್ಯಾಂಕಿಂಗ್ ಕಡಿಮೆ ಬಂದ ವಿದ್ಯಾರ್ಥಿಗಳ ಪೋಷಕರು, ವೈದ್ಯಕೀಯ ಶಿಕ್ಷಣ ಪಡೆಯಲು ಪ್ರಯತ್ನಿಸುತ್ತಿರುವವರ ಮಾಹಿತಿಯನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸುತ್ತಿದ್ದ. ನಂತರ ಅವರುಗಳನ್ನು ಸಂಪರ್ಕಿಸಿ ಬೇರೆ ಬೇರೆ ವೈದ್ಯಕೀಯ ಕಾಲೇಜುಗಳಲ್ಲಿ ಖಾಲಿ ಇರುವ ಅಥವಾ ಡ್ರಾಪ್ ಔಟ್ ಆಗಿರುವ ಸೀಟುಗಳನ್ನು ಕಡಿಮೆ ಖರ್ಚಿನಲ್ಲಿ ತಾನು ಕೊಡಿಸುವುದಾಗಿ ನಂಬಿಸುತ್ತಿದ್ದ.
ಇದೇ ರೀತಿ ತಿಮ್ಮೇಗೌಡ ಎಂಬುವರ ಮಗನಿಗೆ ಕೇರಳದ ವೈದ್ಯಕೀಯ ಕಾಲೇಜೊಂದರಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ, 12 ಲಕ್ಷ ಶುಲ್ಕ ಹೇಳಿ ನಂತರ ಹಂತಹಂತವಾಗಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ಸೀಟು ಕೊಡಿಸದಿದ್ದಾಗ ಆರೋಪಿಯ ಕಚೇರಿಗೆ ಬಂದು ಪರಿಶೀಲಿಸಿದಾಗ ಬೀಗ ಹಾಕಿರುವುದು, ಮತ್ತು 8-10 ಜನ ವಂಚನೆಗೊಳಗಾಗಿರುವುದು ತಿಳಿದು ಬಂದಿತ್ತು.
ಇದನ್ನೂ ಓದಿ: ಅಂತಾರಾಜ್ಯ ನಕಲಿ ಉದ್ಯೋಗ ದಂಧೆ ಭೇದಿಸಿದ ಸಿಬಿಐ; ಬೆಂಗಳೂರಿನ ವ್ಯಕ್ತಿ ಸೇರಿದಂತೆ ಮೂವರ ಬಂಧನ