ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ರಾಜಕಾರಣಿಗಳು ಹಾಗೂ ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಹಣ ಪಡೆದು ಟೋಪಿ ಹಾಕುತ್ತಿದ್ದ ಉತ್ತರ ಭಾರತದ ಮೂಲದ ಇಬ್ಬರು ಆರೋಪಿಗಳನ್ನು ನಗರ ಕೇಂದ್ರ ವಲಯದ ಸಿಎಎನ್ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಚೌಕಿ ಬಂಗಾರ ಗ್ರಾಮದ ಇಬ್ರಾಹಿಂ ಹಾಗೂ ಮೊಹಮ್ಮದ್ ಶೋಕಿಯಾನ್ ಎಂಬುವರನ್ನು ಬಂಧಿಸಲಾಗಿದೆ. ಇವರಿಂದ 5 ಮೊಬೈಲ್ಗಳು,10 ಸಿಮ್ ಕಾರ್ಡ್ಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ಪ್ರಮುಖ ಆರೋಪಿ ಲಿಯಾಕತ್ ತಲೆಮರೆಸಿಕೊಂಡಿದ್ದು ಶೀಘ್ರದಲ್ಲಿ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಿ.ಎಲ್.ಸಂತೋಷ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದ ವಂಚಕರು ಸಂತೋಷ್ ಅವರಿಗೆ ಪರಿಚಿತನಾಗಿದ್ದ ಅಜಿತ್ ಶೆಟ್ಟಿ ಕಿರಾಡಿ ಎಂಬುರಿಗೆ 15 ಸಾವಿರ ಹಣ ಕಳುಹಿಸುವಂತೆ ಫೇಸ್ಬುಕ್ ಮೆಸೆಂಜರ್ನಲ್ಲಿ ಸಂದೇಶ ರವಾನಿಸಿದ್ದಾರೆ. ಇದನ್ನು ನಂಬಿ ಆನ್ಲೈನ್ ಮೂಲಕ 15 ಸಾವಿರ ರೂಪಾಯಿ ಪಾವತಿಸಿದ್ದ. ಇದೇ ರೀತಿ ಹಲವು ಗಣ್ಯರಿಗೆ ಸಂದೇಶ ರವಾನಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ನಗರ ಕೇಂದ್ರ ವಲಯದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ತನಿಖೆಗಿಳಿದ ಇನ್ಸ್ಪೆಕ್ಟರ್ ಪ್ರವೀಣ್ ಬಾಬು ನೇತೃತ್ವದ ತಂಡ ಹಣ ಸಂದಾಯ ಮಾಡಿಕೊಂಡಿದ್ದ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಉತ್ತರ ಪ್ರದೇಶ ಮಥುರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಖಾತೆ ತೆರೆದಿರುವುದು ಗೊತ್ತಾಗಿದೆ. ಇದೇ ಮಾಹಿತಿ ಆಧರಿಸಿ ತನಿಖಾ ತಂಡ ಮಥುರಾ ಕಡೆ ಪ್ರಯಾಣ ಬೆಳೆಸಿತ್ತು.
ಪೊಲೀಸ್ ವಾಹನದ ಮೇಲೆ ಗ್ರಾಮಸ್ಥರ ಹಲ್ಲೆ:
ಖಚಿತ ಮಾಹಿತಿ ಮೇರೆಗೆ ಚೌಕಿ ಬಂಗಾರದ ಗ್ರಾಮದ ಮನೆಯೊಂದರಲ್ಲಿ ಅಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಹತ್ತು ಮಂದಿ ಆರೋಪಿಗಳನ್ನು ವಾಹನದಲ್ಲಿ ಕೂರಿಸಿಕೊಂಡು ಬರುವಾಗ ಗ್ರಾಮಸ್ಥರು ಪೊಲೀಸ್ ವಾಹನ ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪ್ರಮುಖ ಆರೋಪಿ ಲಿಯಾಕತ್ ಸೇರಿದಂತೆ ಹಲವು ಆರೋಪಿಗಳು ಕ್ಷಣಾರ್ಧದಲ್ಲಿ ತಲೆಮೆರೆಸಿಕೊಂಡಿದ್ದು ಇಬ್ರಾಹಿಂ ಹಾಗೂ ಮೊಹಮ್ಮದ್ ಶೋಕಿಯಾನ್ ಸಿಕ್ಕಿಹಾಕಿಕೊಂಡಿದ್ದು ಅಲ್ಲಿಂದ ನಗರಕ್ಕೆ ಕರೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದಿ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ:
ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಲಿಯಾಕತ್ ಪ್ರಥಮ ಪಿಯುಸಿ ವ್ಯಾಸಂಗ ಮಾಡಿದ್ದು ಬಂಧಿತರಾದ ಇಬ್ಬರು ಆರೋಪಿಗಳು 8 ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದಾರೆ. ಹಿಂದಿ ಹೊರತುಪಡಿಸಿದರೆ ಬೇರೆ ಭಾಷೆಗಳನ್ನು ಓದಲು ಹಾಗೂ ಬರೆಯಲು ಬರುತ್ತಿರಲಿಲ್ಲ. ಹೀಗಿದ್ದರೂ ಲಿಯಾಕತ್, ಹಾಯ್, ಹೌ ಆರ್ ಯು, ಐ ಆ್ಯಮ್ ಫೈನ್ ಸೇರಿದಂತೆ ಕೆಲವೇ ಇಂಗ್ಲೀಷ್ ಪದಗಳಲ್ಲಿ ಚಾಟಿಂಗ್ ಮಾಡುವುದನ್ನು ಬಂಧಿತ ಆರೋಪಿಗಳಿಗೆ ಹೇಳಿಕೊಟ್ಟಿದ್ದ. ಇದೇ ಆಧಾರದ ಮೇರೆಗೆ ಗಣ್ಯರೊಂದಿಗೆ ಚಾಟ್ ಮಾಡಿ ಇಂತಿಷ್ಟು ಹಣ ಬೇಕು ಎಂದು ಹೇಳಿ ಬ್ಯಾಂಕ್ ಖಾತೆ ಸಂಖ್ಯೆ ನೀಡಿ ಹಣ ವಸೂಲಿ ಮಾಡುತ್ತಿದ್ದರು.
ಇದನ್ನೂ ಓದಿ : ಸೇಫ್ ಸಿಟಿ ಯೋಜನೆ ಟೆಂಡರ್ ಲೋಪ; ಡಿ.ರೂಪಾಗೆ ಸ್ಪಷ್ಟೀಕರಣ ಕೋರಿ ಗೃಹ ಇಲಾಖೆ ಎಸಿಎಸ್ ಪತ್ರ
ಪಿಂಚಣಿ ಸೌಲಭ್ಯ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಹಣ ದೊರಕಿಸಿಕೊಡುವುದಾಗಿ ಹೇಳಿ ಮುಗ್ಧ ಜನರಿಂದ ದಾಖಲಾತಿ ಪಡೆದು ಸಿಮ್ ಕಾರ್ಡ್ ಪಡೆದು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಅಲ್ಲದೆ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಿಸಿ ಅವರಿಗೆ ನೀಡಲಾಗುವ ಎಟಿಎಂ ಹಾಗೂ ಅದರ ಪಾಸ್ವರ್ಡ್ ಪಡೆದು ತಾವೇ ಬಳಕೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.