ಬೆಂಗಳೂರು: ಖಾಸಗಿ ಕಂಪನಿಯೊಂದ ಹೆಸರೇಳಿಕೊಂಡು ನೀವು ಕೆಲಸಕ್ಕೆ ಆಯ್ಕೆ ಆಗಿದ್ದೀರಾ. ಟ್ರೈನಿಂಗ್ ನಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಕೊಡುತ್ತೇವೆ ಎಂದು ಹೇಳಿ ಯುವಕನೋರ್ವನಿಂದ ಸಾವಿರಾರು ರೂಪಾಯಿ ಪಾವತಿಸಿಕೊಂಡು ಖದೀಮರು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಅನ್ನಸಂದ್ರ ಪಾಳ್ಯ ನಿವಾಸಿ ಫಾರೂಕ್ ಅಬ್ದುಲಾ ಹಣ ಕಳೆದುಕೊಂಡಿರುವ ಯುವಕ. ಈತ ಕೆಲಸಕ್ಕಾಗಿ ಶೋಧ ನಡೆಸುತ್ತಿದ್ದು, ಇತ್ತೀಚೆಗೆ ಶೈನ್ ಡಾಟ್ ಕಾಮ್ ನಲ್ಲಿ ಕೆಲಸಕ್ಕಾಗಿ ರೆಸ್ಯೂಮ್ ಹಾಕಿದ್ದನು. ಇದನ್ನರಿತ ಆನ್ಲೈನ್ ವಂಚಕರು, ಅನನ್ಯ ಎಂಬ ಹೆಸರಿನಲ್ಲಿ ಫಾರೂಕ್ ಗೆ ಕರೆ ಮಾಡಿ ನೀವೂ ಕಂಪನಿಯಲ್ಲಿ ಕೆಲಸಕ್ಕೆ ಸೆಲೆಕ್ಟ್ ಆಗಿದ್ದೀರ. ಆನ್ ಲೈನ್ ಮೂಲಕ ಇಂಟರ್ವ್ಯೂ ಮಾಡುತ್ತೇವೆ. ಇದಕ್ಕಾಗಿ 1380 ರೂ.ಪಾವತಿಸಬೇಕು ಎಂದು ಹೇಳಿ ಬ್ಯಾಂಕ್ ಅಕೌಂಟ್ ನಿಂದ ಹಣ ಕಟ್ಟಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಕೆಲಸಕ್ಕೂ ಸೇರುವ ಮುನ್ನ ಟ್ರೈನಿಂಗ್ ಕೊಡುತ್ತೇವೆ. ಟ್ರೈನಿಂಗ್ ನಲ್ಲಿ ಮೊಬೈಲ್ ಹಾಗೂ ಲ್ಯಾಪ್ಟಾಪ್ ಕೊಡುತ್ತೇವೆ ಎಂದೇಳಿ ಸುಮಾರು 20 ಸಾವಿರ ರೂಪಾಯಿ ಹಣ ತೆಗೆದುಕೊಂಡು ಟೋಪಿ ಹಾಕಿದ್ದಾರೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹಣ ಕಳೆದುಕೊಂಡ ಯುವಕ ವೈಟ್ ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.