ಬೆಂಗಳೂರು: ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ವಿರುದ್ದದ ಸುಮಾರು 3.25 ಕೋಟಿ ರೂಗಳ ಬ್ಯಾಂಕ್ ಸಾಲದ ವಂಚನೆ ಪ್ರಕರಣದ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣ ರದ್ದು ಕೋರಿ ಕೃಷ್ಣಯ್ಯ ಶೆಟ್ಟಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಅವರು ಕಲಬುರಗಿ ಪೀಠದಿಂದ ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಕಟಿಸಿದರು. ಹೈಕೋರ್ಟ್‌ನ ಈ ಆದೇಶದಿಂದ ಕೃಷ್ಣಯ್ಯ ಶೆಟ್ಟಿ ಸಿಬಿಐ ವಿಚಾರಣಾ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸಬೇಕಾಗಿದೆ.
ಪ್ರಕರಣದ ಹಿನ್ನೆಲೆ ಏನು?: ಬೆಂಗಳೂರು ಉತ್ತರ ತಾಲೂಕಿನ ನಾಗವಾರ ಗ್ರಾಮದ ಸರ್ವೇ ನಂಬರ್ 98 ರಲ್ಲಿ 3 ಎಕರೆಗೂ ಹೆಚ್ಚಿನ ಜಾಗದಲ್ಲಿ ಲೇ ಔಟ್ ನಿರ್ಮಾಣಕ್ಕಾಗಿ ಸಾಲ ಪಡೆಯಲಾಗಿತ್ತು. ಈ ಪ್ರದೇಶದಲ್ಲಿ ಗೃಹ ನಿರ್ಮಾಣ ಯೋಜನೆಗೆ ಕೃಷ್ಣಯ್ಯ ಶೆಟ್ಟಿ ಬಾಲಾಜಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ 2003ರಿಂದ 2008ರವರೆಗೆ ಚಾಲ್ತಿ ಖಾತೆಯಲ್ಲಿ ಎಸ್‌ಬಿಎಂನಿಂದ ಸಾಲ ಪಡೆದಿದ್ದಾರೆ. ಇದಕ್ಕಾಗಿ ಅವರು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.
‘ಲೇ ಔಟ್ ನಿರ್ಮಾಣಕ್ಕೆ ಇವರು ಬಯಾಪದಿಂದ (ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ) ಯೋಜನಾ ಮಂಜೂರಾತಿ ಪಡೆದಿಲ್ಲ. ಬೆಸ್ಕಾಂ ಮತ್ತು ಬೆಂಗಳೂರು ಜಲಮಂಡಳಿಯಿಂದ ನಿರಾಕ್ಷೇಪಣಾ ಪತ್ರವನ್ನೂ ಪಡೆದಿಲ್ಲ. ಅಂತೆಯೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಭಿವೃದ್ಧಿ ಶುಲ್ಕವನ್ನೂ ಪಾವತಿ ಮಾಡಿರುವುದಿಲ್ಲ’ ಎಂದು ಸಿಬಿಐ ಬಲವಾಗಿ ಆಕ್ಷೇಪಿಸಿತ್ತು.
ಇದನ್ನೂ ಓದಿ: ಮುಸ್ಲಿಮರ 2ಬಿ ಮೀಸಲಾತಿ ರದ್ದು ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ
ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದಸ್ಯರ ನೇಮಕ ; ಕಾಲಾವಕಾಶ ಕೋರಿದ ಸರ್ಕಾರ : ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲು ಚುನಾವಣೆ ಮುಗಿಯುವ ತನಕ ರಾಜ್ಯ ಸರ್ಕಾರ ಕಾಲಾವಕಾಶ ನೀಡುವಂತೆ ಹೈಕೋರ್ಟ್ಗೆ ಮನವಿ ಮಾಡಿದೆ.
ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್ ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠದ ವಿಚಾರಣೆ ನಡೆಯಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರಾದ ಪ್ರತಿಮಾ ಹೊನ್ನಾಪುರ ಅವರ ವಾದ ಮಂಡಿಸಿ, ಅಧ್ಯಕ್ಷರ ಸ್ಥಾನಕ್ಕೆ ಮೂವರು ನಿವೃತ್ತ ನ್ಯಾಯಮೂರ್ತಿಗಳ ಹೆಸರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಶಿಫಾರಸು ಆಗಿ ಸರ್ಕಾರಕ್ಕೆ ಬಂದಿದೆ. ಆ ಮೂವರನ್ನು ಒಬ್ಬರ ಹೆಸರನ್ನು ಅಂತಿಮಗೊಳಿಸಬೇಕಾಗಿದೆ. ಅದೇ ರೀತಿ ಇಬ್ಬರು ಸದಸ್ಯರ ನೇಮಕಕ್ಕೆ 2023ರ ಜ.31ರಂದು ಅಧಿಸೂಚನೆ ಹೊರಡಿಸಲಾಗಿತ್ತು. 19 ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ಇಬ್ಬರನ್ನು ಆಯ್ಕೆ ಮಾಡಬೇಕಾಗಿದೆ.
ಈ ಮಧ್ಯೆ ಬುಧವಾರವಷ್ಟೇ (ಮಾ.29) ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಅಧಿಕಾರಿ ವರ್ಗ ಚುನಾವಣಾ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಅಧ್ಯಕ್ಷರ ಮತ್ತು ಸದಸ್ಯರ ಆಯ್ಕೆ ಪ್ರಕ್ರಿಯೆ ಚುನಾವಣೆ ಬಳಿಕವಷ್ಟೇ ಪೂರ್ಣಗೊಳಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಮೇ 30ಕ್ಕೆ ಮುಂದೂಡಿತು.
ಇದನ್ನೂ ಓದಿ : ಬೆಂಗಳೂರು ಮತದಾರರಿಗೆ ಖುಷಿ ಸುದ್ದಿ: ಮತದಾನದ ವೇಳೆ ಉದ್ದನೆಯ ಕ್ಯೂ ತಪ್ಪಿಸಲು ಮೊಬೈಲ್ ಆಪ್ ಅಭಿವೃದ್ಧಿ