ಬೆಂಗಳೂರು: ಉದ್ಯಮಿಯೊಬ್ಬರಿಗೆ ವಿಧಾನಸಭಾ ಚುನಾವಣಾ ಅಭ್ಯರ್ಥಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದ ಏಳು ಜನ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 3ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ಆರೋಪಿಗಳಾದ ಚೈತ್ರಾ, ಗಗನ್, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಹಾಗೂ ಚೆನ್ನಾ ನಾಯ್ಕ್ ಕಸ್ಟಡಿ ಅವಧಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರು ಪಡಿಸಿದ್ದರು. ಸಿಸಿಬಿ ತನಿಖೆಗೆ ಮತ್ತೆ ಅವಶ್ಯಕತೆ ಇಲ್ಲವೆಂದು ತನಿಖಾಧಿಕಾರಿ ಸ್ಪಷ್ಟಪಡಿಸಿದ ಕಾರಣ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಆರೋಪಿಗಳ ಪರ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸೆಪ್ಟೆಂಬರ್ 26 ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಬಾಡಿ ವಾರೆಂಟ್, ಚೈತ್ರಾ ವಿಚಾರಣೆ: ಇದೇ ಸಂದರ್ಭದಲ್ಲಿ ಪ್ರಕರಣವೊಂದರ ವಿಚಾರಣೆಗಾಗಿ ಆರೋಪಿ ಚೈತ್ರಾಳನ್ನು ಬಾಡಿ ವಾರೆಂಟ್ ಆಧಾರದಲ್ಲಿ ವಶಕ್ಕೆ ನೀಡುವಂತೆ ಉಡುಪಿಯ ಕೋಟಾ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಬಟ್ಟೆ ಅಂಗಡಿ ಹಾಕಿ ಕೊಡುವುದಾಗಿ 2018 ರಿಂದ 2023ರ ವರೆಗೆ ಹಂತ ಹಂತವಾಗಿ 5 ಲಕ್ಷ ರೂಪಾಯಿ ಪಡೆದು ಚೈತ್ರಾ ತಮಗೆ ಮೋಸ ಮಾಡಿರುವುದಾಗಿ ಸುದೀನ್ ಎಂಬುವವರು ಕೋಟಾ ಪೊಲೀಸ್ ಠಾಣಾ ಮೆಟ್ಟಿಲೇರಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾಳ ವಿಚಾರಣೆ ಮಾಡಬೇಕಾಗಿದೆ. ಆದ್ದರಿಂದ ಬಾಡಿ ವಾರೆಂಟ್ ಮೂಲಕ ಚೈತ್ರಾ ವಿಚಾರಣೆಗೆ ಅವಕಾಶ ಕಲ್ಪಿಸುವಂತೆ ಕೋಟಾ ಪೊಲೀಸರು ಮನವಿ ಮಾಡಿದ್ದಾರೆ.
ಹಾಲಶ್ರೀ ಸ್ವಾಮೀಜಿ ಬಂಧಿಸಿದ ಬಳಿಕ ಚೈತ್ರಾ ಮೌನ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ಸಂಬಂಧ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಬಂಧಿಸಿದರೆ, ದೊಡ್ಡವರ ಹೆಸರು ಬಹಿರಂಗವಾಗಲಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ಬಂಧಿತೆ ಚೈತ್ರಾ ಸಿಸಿಬಿ ವಿಚಾರಣೆ ವೇಳೆ ಮೌನವಾಗಿದ್ದಾರೆ.
ಉದ್ಯಮಿ ಗೋವಿಂದ ಬಾಬು ಪೂಜಾರಿ 5 ಕೋಟಿ ರೂ. ವಂಚನೆ ಆರೋಪದಡಿ ಬಂಧಿತರಾಗಿದ್ದ ಚೈತ್ರಾ, ಮಾಧ್ಯಮಗಳ ಮುಂದೆ ಸ್ವಾಮೀಜಿ ಹಾಲಶ್ರೀ ಬಂಧಿಸಿದರೆ ದೊಡ್ಡವರ ಹೆಸರು ಹೊರಬರಲಿದೆ ಎಂದು ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ತಿರುವು ಕೊಟ್ಟಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸ್ವಾಮೀಜಿ ಬಂಧನ ಬಳಿಕ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿರುವ ಬಗ್ಗೆ ತನಿಖಾಧಿಕಾರಿಗಳು ಶಂಕಿಸಿದ್ದರು.
ಎರಡು ದಿನಗಳ ಹಿಂದೆ ಹಾಲಶ್ರೀ ಬಂಧಿಸಿದ್ದರು. ಸ್ವಾಮೀಜಿ ವಿಚಾರಣೆ ವೇಳೆ ಚೈತ್ರಾ ಹಾಗೂ ಗಗನ್ ಎಂಬುವರೇ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು, ಇದರ ಹಿಂದೆ ಯಾರು ದೊಡ್ಡವರಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು ಎನ್ನಲಾಗಿದೆ. ಮತ್ತೊಂದೆಡೆ ವಿಚಾರಣೆ ಎದುರಿಸುತ್ತಿರುವ ಚೈತ್ರಾಳನ್ನು ಪ್ರಶ್ನಿಸಿದರೆ ಮೌನಕ್ಕೆ ಜಾರಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಅನ್ಯ ವ್ಯಕ್ತಿಗಳು ಯಾರಿಲ್ಲ. ಸ್ವಾಮೀಜಿ, ಗಗನ್ ಸೇರಿ ಇನ್ನಿತರ ಆರೋಪಿಗಳು ಕೃತ್ಯವೆಸಗಿದ್ದೇವೆ ಎಂದು ಚೈತ್ರಾ ಎಂದು ಒಪ್ಪಿಕೊಂಡಿರುವುದಾಗಿ ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂಓದಿ: ಬೆಂಗಳೂರು: ಮಹಿಳಾ ಟೆಕ್ಕಿಯಿಂದ 'ಲವ್ ಜಿಹಾದ್' ದೂರು; ಕಾಶ್ಮೀರಕ್ಕೆ ತೆರಳಿದ ಪೊಲೀಸರು