ಬೆಂಗಳೂರು: ಕೆಲಸ ಹುಡುಕುತ್ತಿರುವ ಯುವಕ, ಯುವತಿಯರಿಗಿದು ಎಚ್ಚರಿಕೆಯ ಗಂಟೆ!. ಸ್ಟಾರ್ಟಪ್ ಕಂಪನಿಯೊಂದರಲ್ಲಿ ಕೈ ತುಂಬ ಸಂಬಳ ಕೊಡುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿದ್ದ ಗ್ಯಾಂಗ್ವೊಂದರ ಪ್ರಮುಖ ಆರೋಪಿಯನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪವನ್ ಕುಮಾರ್ ಕೊಲ್ಲಿ ಬಂಧಿತ ಆರೋಪಿ. ಮಧು ಹಾಗೂ ರತ್ನಕಾಂತ್ ಎಂಬ ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.
SIMAKH TECHNOLOGY & MONTY CORPS ಎಂಬ ಕಂಪನಿ ತೆರೆದಿದ್ದ ಆರೋಪಿಗಳು ಆಂಧ್ರ ಮೂಲದ ವಿದ್ಯಾವಂತ ಯುವ ಸಮುದಾಯವನ್ನು ಗುರಿಪಡಿಸಿ ಹಣ ಪಡೆದು ವಂಚಿಸುತ್ತಿದ್ದರು. ಹೈ ಫೈ ಟೆಕ್ ಪಾರ್ಕ್ಗಳಲ್ಲಿ ಕಚೇರಿ ತೆರೆಯುತ್ತಿದ್ದ ಆರೋಪಿಗಳು ಪರಿಚಯಸ್ಥರ ಮೂಲಕ ನಿರುದ್ಯೋಗಿಗಳಿಗೆ ಗಾಳ ಹಾಕುತ್ತಿದ್ದರು. ತಮ್ಮ ಕಂಪನಿಯಲ್ಲಿ ಅಥವಾ ಬೇರೆ ಕಂಪನಿಯಲ್ಲಿ ಕೆಲಸ ಹಾಗೂ ವರ್ಷಕ್ಕೆ ಐದು ಲಕ್ಷ ರೂ. ಪ್ಯಾಕೇಜ್ ಕೊಡುವುದಾಗಿ ಭರವಸೆ ನೀಡುತ್ತಿದ್ದರು. ನಂತರ ಒಬ್ಬೊಬ್ಬರಿಂದ ಲಕ್ಷ ಲಕ್ಷ ರೂ. ಹಣ ಪಡೆದು, ಒಂದು ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಕೊಟ್ಟು ಕೆಲಸಕ್ಕೆ ನೇಮಿಸಿಕೊಂಡಂತೆ ನಾಟಕವಾಡುತ್ತಿದ್ದರು. ಬಳಿಕ, ಒಂದು ತಿಂಗಳ ಸಂಬಳವನ್ನೂ ಕೊಡುತ್ತಿದ್ದ ಆರೋಪಿಗಳು, ನಂತರ ಕಂಪನಿ ಬಂದ್ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಇದೇ ರೀತಿ ನಗರದ ಬೇರೆ ಬೇರೆ ಭಾಗಗಳಲ್ಲಿಯೂ ವಂಚಿಸಿದ್ದರು.
ಇದನ್ನೂ ಓದಿ: ಬೆಂಗಳೂರು : ಸಹಾಯದ ನೆಪದಲ್ಲಿ ಉದ್ಯಮಿಗಳಿಗೆ ವಂಚನೆ, ಪ್ರಕರಣ ದಾಖಲು
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?: ಐದು ನೂರಕ್ಕೂ ಅಧಿಕ ಜನರಿಗೆ ವಂಚಿಸಿದ್ದ ಪ್ರಮುಖ ಆರೋಪಿ ಪವನ್ ಕುಮಾರ್ ಕೊಲ್ಲಿ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ. ಆತನನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ಬಲೆ ಹೆಣೆದಿದ್ದ ಸಂತ್ರಸ್ತರು, ಬೇರೊಬ್ಬರಿಂದ ಕರೆ ಮಾಡಿಸಿ ಮೂವತ್ತು ಜನರು ಕಂಪನಿ ಸೇರಿಕೊಳ್ಳಲು ಬಂದಿದ್ದಾರೆ. ಹಣದ ಜೊತೆ ಸಿದ್ಧವಿದ್ದಾರೆ ಎಂದು ಆರೋಪಿಗೆ ಕರೆ ಮಾಡಿದ್ದರು. ಇದು ನಿಜವೆಂದು ನಂಬಿದ್ದ ಪವನ್ ಕುಮಾರ್ ಆತುರವಾಗಿ ಬೆಂಗಳೂರಿಗೆ ವಿಮಾನದ ಮೂಲಕ ಬಂದಿದ್ದ. ಬಳಿಕ, ಆತನನ್ನು ಖಾಸಗಿ ಹೋಟೆಲ್ ಬಳಿ ಕರೆಸಿಕೊಂಡಿದ್ದ ಸಂತ್ರಸ್ತರ ತಂಡ ಲಾಕ್ ಮಾಡಿದೆ.
ಈ ವೇಳೆ ಆತನೇ ಪೊಲೀಸ್ ಸಹಾಯವಾಣಿ ಕರೆ ಮಾಡಿದ್ದಾನೆ. ಅದರಂತೆ ಸ್ಥಳಕ್ಕೆ ಹೋದ ಪೊಲೀಸರಿಗೆ ಅಸಲಿ ಸಂತ್ರಸ್ತರು ಯಾರೆಂಬುದು ತಿಳಿದಿದೆ. ತಕ್ಷಣ ಆರೋಪಿಯನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಇದುವರೆಗೆ ಸುಮಾರು ₹20 ಕೋಟಿಗೂ ಅಧಿಕ ಹಣ ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದ್ದು, ಹೆಚ್ಚಿನ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ-ಪಾಕ್ ಪಂದ್ಯಕ್ಕೆ ಟಿಕೆಟ್ ನೀಡುವುದಾಗಿ ಮಹಿಳಾ ಉದ್ಯಮಿಗೆ 34 ಲಕ್ಷ ರೂ. ವಂಚಿಸಿದ್ದ ಆರೋಪಿ ಬಂಧನ